ಛತ್ತೀಸ್ ಗಡ: ಭಕ್ತರ ಮೇಲೆ ಹರಿದ ಕಾರು, ಓರ್ವ ಬಲಿ, 20 ಮಂದಿಗೆ ಗಾಯ
Update: 2021-10-15 17:53 IST
ಹೊಸದಿಲ್ಲಿ: ಛತ್ತೀಸ್‌ಗಡದ ಜಶ್‌ಪುರ ಜಿಲ್ಲೆಯಲ್ಲಿ ದುರ್ಗಾದೇವಿಯ ವಿಗ್ರಹವನ್ನು ವಿಸರ್ಜಿಸಲು ಭಕ್ತರು ತೆರಳುತ್ತಿದ್ದಾಗ ಕಾರೊಂದು ಜನರ ಮೇಲೆ ಹರಿದ ಪರಿಣಾಮವಾಗಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು, ಸುಮಾರು 20 ಮಂದಿ ಗಾಯಗೊಂಡಿದ್ದಾರೆ ಎಂದು NDTV ವರದಿ ಮಾಡಿದೆ.
ಸಾವನ್ನಪ್ಪಿದ ವ್ಯಕ್ತಿಯನ್ನು ಗೌರವ್ ಅಗರ್‌ವಾಲ್ (21) ಎಂದು ಗುರುತಿಸಲಾಗಿದ್ದು, ಇವರು ಜಶ್‌ಪುರದ ಪಾಥಲ್‌ಗಾಂವ್ ನಿವಾಸಿಯಾಗಿದ್ದಾರೆ. ಗಾಯಗೊಂಡವರನ್ನು ಚಿಕಿತ್ಸೆಗಾಗಿ ಪಾಥಲ್ ಗಾಂವ್ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮರೂನ್ ಮಹೀಂದ್ರ ಕ್ಸೈಲೊ ಕಾರು ಮಧ್ಯಪ್ರದೇಶದ ನಂಬರ್ ಪ್ಲೇಟ್ ಹೊಂದಿದ್ದು, ಭೀಕರ ಅಪಘಾತದ ನಂತರ ವೇಗವಾಗಿ ಸುಖ್ರಪಾರ ಕಡೆಗೆ ಚಲಿಸಿದೆ ಎಂದು ತಿಳಿದುಬಂದಿದೆ. ಕೋಪಗೊಂಡ ಸ್ಥಳೀಯರು ವಾಹನವನ್ನು ಹಿಂಬಾಲಿಸಿದರು ಹಾಗೂ ವಾಹನವು ರಸ್ತೆಯ ಪಕ್ಕದಲ್ಲಿ ಪತ್ತೆಯಾಗಿದೆ.