×
Ad

ಗುರುಗ್ರಾಮ: ತೆರೆದ ಪ್ರದೇಶದಲ್ಲಿ ನಮಾಝ್‌ ಗೆ ವಿರೋಧಿಸಿ ಸತತ 4 ವಾರಗಳಿಂದ ಜನರ ಪ್ರತಿಭಟನೆ

Update: 2021-10-16 17:18 IST
Photo: Twitter

ಹೊಸದಿಲ್ಲಿ: ಗುರುಗ್ರಾಮದ ಸೆಕ್ಟರ್ 47 ನಲ್ಲಿನ ತೆರೆದ ಪ್ರದೇಶದಲ್ಲಿ ಶುಕ್ರವಾರ ಮುಸ್ಲಿಮರು ನಮಾಝ್ ಸಲ್ಲಿಸಿದ್ದನ್ನು ವಿರೋಧಿಸಿ ಸ್ಥಳೀಯ ಜನರ ಒಂದು ಗುಂಪು ಪ್ರತಿಭಟನೆ ನಡೆಸಿದ ಪರಿಣಾಮ ಪೊಲೀಸರು ಮಧ್ಯಪ್ರವೇಶಿಸಬೇಕಾದ ಘಟನೆ ನಡೆದಿದೆ. ಶುಕ್ರವಾರ ನಮಾಝ್ ಸಲ್ಲಿಕೆ ವೇಳೆ ಸ್ಥಳಿಯರು  ಸತತ  ನಾಲ್ಕನೇ ವಾರ ನಿನ್ನೆ ಪ್ರತಿಭಟನೆ ನಡೆಸಿದ್ದಾರೆ ಎಂದು THEWIRE.IN ವರದಿ ಮಾಡಿದೆ.

ಮುಸ್ಲಿಂ ಸಮುದಾಯದ ಮಂದಿ ಪ್ರಾರ್ಥನೆಗಾಗಿ ಒಟ್ಟು ಸೇರಿದ ಸ್ಥಳದಲ್ಲಿ ಸುಮಾರು 70ರಿಂದ 80 ಸ್ಥಳೀಯರು ಮೈಕ್ರೊಫೋನ್  ಮತ್ತು ಪೋರ್ಟೇಬಲ್ ಸ್ಪೀಕರ್ ಬಳಸಿ ಭಜನೆ ಹಾಡುತ್ತಾ ಸಾಗಿದರಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ ನಮಾಝ್ ಸಲ್ಲಿಕೆ ನಿಲ್ಲಿಸದ ಸರಕಾರದ ವಿರುದ್ಧ ಘೋಷಣೆ ಕೂಗಿದರು.

ತೆರೆದ ಸ್ಥಳಗಳಲ್ಲಿ ನಮಾಝ್ ಸಲ್ಲಿಕೆಗೆ ಅನುಮತಿ ನೀಡಲಾಗಿರುವ 37 ಸ್ಥಳಗಳಲ್ಲಿ ಈ ಗುರುಗ್ರಾಮದ ಸೆಕ್ಟರ್ 47ರಲ್ಲಿರುವ ಪ್ರದೇಶವೂ ಒಂದಾಗಿದೆ. 2018ರಲ್ಲಿಯೂ ಇಂತಹುದೇ ಪ್ರತಿಭಟನೆಗಳು ನಡೆದ ನಂತರ ಎರಡೂ ಸಮುದಾಯಗಳು ಪರಸ್ಪರ ಒಪ್ಪಿಗೆಯೊಂದಿಗೆ ನಿಗದಿ ಪಡಿಸಿದ ಸ್ಥಳ ಇದಾಗಿದೆ. ಆದರೆ ಇಂತಹ ಒಂದು ಏರ್ಪಾಟು ಶಾಶ್ವತವಾಗಿರಲು ಸಾಧ್ಯವಿಲ್ಲ ಎಂದು ಸ್ಥಳೀಯ ನಿವಾಸಿಗಳು ಹೇಳುತ್ತಿದ್ದಾರೆ.

ನಮಾಝ್ ಶಾಂತಿಯುತವಾಗಿ ನಡೆದಿದೆ, ಸಮಸ್ಯೆಯನ್ನು ಮಾತುಕತೆ ಮೂಲಕ ಇತ್ಯರ್ಥಪಡಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

ಆದರೆ ಕೆಲವರು ಈ ರೀತಿ ಪ್ರಾರ್ಥನೆಗೆ ಅಡ್ಡಿಪಡಿಸಿ ರಾಜಕೀಯ ಲಾಭಗಿಟ್ಟಿಸಲು ಯತ್ನಿಸುತ್ತಿದ್ದಾರೆ ಎಂದು ಮುಸ್ಲಿಂ ಸಮುದಾಯದ ನಾಯಕರುಗಳು ಆರೋಪಿಸುತ್ತಿದ್ದಾರೆ.

ನಮಾಝ್‍ಗೆ ಅಡ್ಡಿಪಡಿಸುವವರ ಹಿಂದು ಹಿಂದುತ್ವ ಸಂಘಟನೆ ಭಾರತ್ ಮಾತಾ ವಾಹಿನಿಯ ನಾಯಕ ದಿನೇಶ್ ಭಾರತಿ ಎಂಬಾತನಿದ್ದಾನೆಂದು ಹೇಳಲಾಗಿದೆ. ಆತ ಸೆಪ್ಟೆಂಬರ್ 24ರಂದು ತನ್ನ ಸಾಮಾಜಿಕ ಜಾಲತಾಣ ಪುಟದಲ್ಲಿ ವೀಡಿಯೋವೊಂದನ್ನು ಪೋಸ್ಟ್ ಮಾಡಿ, "ಸರಕಾರ ಈ ತೆರೆದ ಸ್ಥಳದಲ್ಲಿ ನಮಾಝ್ ನಿಲ್ಲಿಸದೇ ಇದ್ದರೆ ನಾವು ಅಲ್ಲಿ ಗೋಶಾಲೆ ಮತ್ತು ಗುರುಕುಲ ತೆರೆಯುತ್ತೇವೆ ಮತ್ತು ಹನುಮಾನ್ ಮಂದಿರ ನಿರ್ಮಿಸುತ್ತೇವೆ" ಎಂದು ಹೇಳಿಕೊಂಡಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News