ಕೇರಳ ಭಾರೀ ಮಳೆ: ಮೃತರ ಸಂಖ್ಯೆ 21ಕ್ಕೆ ಏರಿಕೆ, ಮುಂದುವರಿದ ರಕ್ಷಣಾ ಕಾರ್ಯಾಚರಣೆ

Update: 2021-10-17 16:06 GMT
(ಫೋಟೊ: PTI)

ತಿರುನಂತಪುರ, ಅ. 17: ಕೇರಳದಲ್ಲಿ ಸುರಿದ ಭಾರೀ ಮಳೆಯಿಂದ ಇಡುಕ್ಕಿ ಹಾಗೂ ಕೋಟಯಂ ಜಿಲ್ಲೆಗಳಲ್ಲಿ ಸಂಭವಿಸಿದ ಭೂಕುಸಿತದ ಪರಿಣಾಮ ಮೃತಪಟ್ಟವರ ಸಂಖ್ಯೆ 21 ಏರಿಕೆಯಾಗಿದೆ. ಇಂದು ಹಾಗೂ ನಾಳೆ ಶಬರಿಮಲೆ ದೇವಾಲಯಕ್ಕೆ ಭೇಟಿ ನೀಡದಂತೆ ಅಯ್ಯಪ್ಪ ಭಕ್ತರಲ್ಲಿ ವಿನಂತಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

ಕೇರಳದ ವಿವಿಧ ಭಾಗಗಳಲ್ಲಿ ಇಂದು ಬೆಳಗ್ಗೆ ಮಳೆಯ ತೀವ್ರತೆ ಕಡಿಮೆಯಾಗಿದೆ. ಆದರೆ, ಶನಿವಾರ ರಾತ್ರಿ ಮಳೆ ನಿರಂತರ ಸುರಿದಿದೆ.
 ‘‘ಭಾರೀ ಮಳೆ ಹಾಗೂ ನೆರೆಯ ಹಿನ್ನೆಲೆಯಲ್ಲಿ ಕೇರಳದ ವಿವಿಧ ಭಾಗಗಳ ಪರಿಸ್ಥಿತಿಯ ಕುರಿತು ನಾವು ನಿರಂತರ ಉಸ್ತುವಾರಿ ನಡೆಸುತ್ತಿದ್ದೇವೆ. ಅಗತ್ಯವಿರುವ ಎಲ್ಲ ಜನರಿಗೆ ಕೇಂದ್ರ ಸರಕಾರ ನೆರವು ನೀಡಲಿದೆ. ರಕ್ಷಣಾ ಕಾರ್ಯಾಚರಣೆಗೆ ನೆರವು ನೀಡಲು ಈಗಾಗಲೇ ಎನ್ಡಿಆರ್ಎಫ್ ತಂಡಗಳನ್ನು ಕಳುಹಿಸಿ ಕೊಡಲಾಗಿದೆ. ಪ್ರತಿಯೊಬ್ಬರು ಸುರಕ್ಷಿತವಾಗಿರಲಿ ಎಂದು ಪ್ರಾರ್ಥಿಸೋಣ’’ ಎಂದು ಗೃಹ ಸಚಿವ ಅಮಿತ್ ಶಾ ಇಂದು ಬೆಳಗ್ಗೆ ಟ್ವೀಟ್ ಮಾಡಿದ್ದಾರೆ.

ಭೂಕುಸಿತದಲ್ಲಿ ಮೃತಪಟ್ಟವರ ಕುಟುಂಬದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ. ‘‘ಕೇರಳದಲ್ಲಿ ಸುರಿದ ಭಾರೀ ಮಳೆ ಹಾಗೂ ಭೂಕುಸಿತದಿಂದ ಹಲವರು ಪ್ರಾಣ ಕಳೆದುಕೊಂಡಿರುವುದು ದುಃಖ ಉಂಟು ಮಾಡಿದೆ. ಮೃತಪಟ್ಟವರ ಕುಟುಂಬಕ್ಕೆ ಸಂತಾಪ ವ್ಯಕ್ತಪಡಿಸುತ್ತೇನೆ’’ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

ಪ್ರಧಾನಿ ಅವರು ಪಿಣರಾಯಿ ವಿಜಯನ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಭಾರೀ ಮಳೆ ಹಾಗೂ ಭೂಕುಸಿತದಿಂದ ಸಂಭವಿಸಿದ ದುರಂತಗಳ ಬಗ್ಗೆ ಅವರೊಂದಿಗೆ ಚರ್ಚೆ ನಡೆಸಿದ್ದಾರೆ. ರಕ್ಷಣಾ ಕಾರ್ಯಾಚರಣೆ ಪ್ರಯತ್ನವನ್ನು ತೀವ್ರಗೊಳಿಸಲು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಶನಿವಾರ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಅಲ್ಲದೆ, ಕೋಟ್ಟಯಂ ಸೇರಿದಂತೆ ಭಾರೀ ಮಳೆಯಿಂದ ಜಲಾವೃತವಾದ ಪ್ರದೇಶಗಳಲ್ಲಿ ಸಿಲುಕಿಕೊಂಡ ಜನರನ್ನು ಸ್ಥಳಾಂತರಗೊಳಿಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳುವಂತೆ ಅವರು ಸೂಚಿಸಿದ್ದಾರೆ.

ಕೋವಿಡ್ ಶಿಷ್ಟಾಚಾರ ಅನುಸರಿಸಿ ಶಿಬಿರ ಆರಂಭಿಸಬೇಕು ಎಂದು ಅವರು ನಿರ್ದೇಶಿಸಿದ್ದಾರೆ. ಶಿಬಿರದಲ್ಲಿ ಮಾಸ್ಕ್, ಸ್ಯಾನಿಟೈಸರ್, ಕುಡಿಯುವ ನೀರು, ಔಷದ ಲಭ್ಯವಿರಬೇಕು. ಇತರ ರೋಗಗಳಿಂದ ಬಳಲುತ್ತಿರುವವರು ಹಾಗೂ ಕೋವಿಡ್ ಲಸಿಕೆ ತೆಗೆದುಕೊಳ್ಳದವರ ಬಗ್ಗೆ ಎಚ್ಚರಿಕೆ ತೆಗೆದುಕೊಳ್ಳಬೇಕು ಎಂದು ಅವರು ಸೂಚಿಸಿದ್ದಾರೆ.

 ರಾಜ್ಯದ ಕಾಲೇಜುಗಳನ್ನು ತೆರೆಯಲು ಅಕ್ಟೋಬರ್ 18ರಂದು ದಿನಾಂಕ ನಿಗದಿಪಡಿಸಲಾಗಿತು. ಆದರೆ, ಭಾರೀ ಮಳೆಯಿಂದಾಗಿ ಕಾಲೇಜು ಆರಂಭವನ್ನು ಅಕ್ಟೋಬರ್ 20ಕ್ಕೆ ಮುಂದೂಡಲಾಗಿದೆ.

 ಜಿಲ್ಲೆಗಳಲ್ಲಿ ಸುರಿದ ಭಾರೀ ಮಳೆಯಿಂದ ಅಣೆಕಟ್ಟಿನ ಜಲಾನಯನ ಪ್ರದೇಶಗಳಲ್ಲಿ ನೀರಿನ ಮಟ್ಟ ನಿರಂತರ ಏರಿಕೆಯಾಗುತ್ತಿದೆ. ನೀರಿನ ಮಟ್ಟದಲ್ಲಿ ಏರಿಕೆಯಾಗುತ್ತಿರುವುದರಿಂದ ಮಣಿಯಾರ್ ಅಣೆಕಟ್ಟಿನ ಗೇಟು ತೆರೆಯಲಾಗಿದೆ. ಇಡುಕ್ಕಿ ಹಾಗೂ ಕೋಟ್ಟಯಂ ಜಿಲ್ಲೆಗಳಲ್ಲಿ ಭೂಕುಸಿತ ಸಂಭವಿಸಿವೆ. ಇಲ್ಲಿನ ಪ್ರತಿಕೂಲ ಹವಾಮಾನ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿ ಉಂಟು ಮಾಡುತ್ತಿದೆ.

ರಾಜ್ಯ ಸರಕಾರದ ಮನವಿಯ ಹಿನ್ನೆಲೆಯಲ್ಲಿ ಸೇನಾಪಡೆ, ವಾಯು ಪಡೆ ಹಾಗೂ ನೌಕಾ ಪಡೆ ಪರಿಸ್ಥಿತಿ ನಿಭಾಯಿಸಲು ನಾಗರಿಕ ಆಡಳಿತಕ್ಕೆ ನೆರವಾಗಲು ನಿರ್ಧರಿಸಿವೆ. ಇಲ್ಲಿ 11 ತಂಡಗಳನ್ನು ನಿಯೋಜಿಸಲು ಎನ್ಡಿಆರ್ಎಫ್ ನಿರ್ಧರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News