ಗುಜರಾತ್:ಸೂರತ್ ಪ್ಯಾಕೇಜಿಂಗ್ ಘಟಕದಲ್ಲಿ ಬೆಂಕಿ;ಇಬ್ಬರು ಕಾರ್ಮಿಕರು ಮೃತ್ಯು

Update: 2021-10-18 16:42 GMT
ಸಾಂದರ್ಭಿಕ ಚಿತ್ರ

ಸೂರತ್(ಗುಜರಾತ),ಅ.18: ಸೂರತ್ ಜಿಲ್ಲೆಯ ಕಡೋದರಾ ಕೈಗಾರಿಕಾ ಪ್ರದೇಶದಲ್ಲಿಯ ಐದು ಅಂತಸ್ತುಗಳ ಪ್ಯಾಕೇಜಿಂಗ್ ಘಟಕದಲ್ಲಿ ಸೋಮವಾರ ಬೆಳಗಿನ ಜಾವ ಸಂಭವಿಸಿದ ಭಾರೀ ಬೆಂಕಿ ಅವಘಡದಲ್ಲಿ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ. ಸುಮಾರು 145 ಕಾರ್ಮಿಕರನ್ನು ರಕ್ಷಿಸಲಾಗಿದ್ದು,ಅವರ ಪೈಕಿ ಹಲವರು ರಕ್ಷಣಾ ಕಾರ್ಯಾಚರಣೆ ವೇಳೆ ಗಾಯಗೊಂಡಿದ್ದಾರೆ. ಅವರನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
 
ನಸುಕಿನ 4:30ರ ಸುಮಾರಿಗೆ ವಿವಾ ಪ್ಯಾಕೇಜಿಂಗ್ ಘಟಕದ ತಳಅಂತಸ್ತಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು,ಮೂರನೇ ಅಂತಸ್ತಿನವರೆಗೆ ಜ್ವಾಲೆಗಳು ವ್ಯಾಪಿಸಿದ್ದವು. ಇದರಿಂದಾಗಿ ಮೇಲಿನ ಅಂತಸ್ತುಗಳಲ್ಲಿದ್ದ ಕಾರ್ಮಿಕರು ಭೀತಿಗೊಳಗಾಗಿದ್ದು,ಅವರ ಪೈಕಿ ಹಲವರು ಕಟ್ಟಡದ ಕಿಟಕಿಗಳು ಮತ್ತು ಪೈಪ್ಗಳ ಮೂಲಕ ಪಾರಾಗಲು ಯತ್ನಿಸಿದ್ದರು. ಬೆಂಕಿಯಿಂದ ಪಾರಾಗಲು ಪೈಪ್ ಹಿಡಿದು ಕೆಳಗಿಳಿಯಲು ಪ್ರಯತ್ನಿಸಿದ್ದ ಕಾರ್ಮಿಕನೋರ್ವ ಮೂರನೇ ಅಂತಸ್ತಿನಿಂದ ಬಿದ್ದು ಮೃತಪಟ್ಟಿದ್ದಾನೆ. ತಳಅಂತಸ್ತಿನಲ್ಲಿ ಹೊಗೆಯಿಂದ ಉಸಿರುಗಟ್ಟಿ ಮೃತಪಟ್ಟಿದ್ದ ಇನ್ನೋರ್ವ ಕಾರ್ಮಿಕನ ಶವ ಪತ್ತೆಯಾಗಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದರು.

18 ಅಗ್ನಿಶಾಮಕ ಯಂತ್ರಗಳು ಮತ್ತು ಎರಡು ಹೈಡ್ರಾಲಿಕ್ ಕ್ರೇನ್ಗಳನ್ನು ಬೆಂಕಿಯನ್ನು ನಂದಿಸುವ ಮತ್ತು ರಕ್ಷಣಾ ಕಾರ್ಯಾಚರಣೆಗೆ ತೊಡಗಿಸಲಾಗಿತ್ತು. ಬೆಳಿಗ್ಗೆ 9:30ರ ಸುಮಾರಿಗೆ ಬೆಂಕಿಯನ್ನು ಸಂಪೂರ್ಣವಾಗಿ ನಿಯಂತ್ರಿಸಲಾಗಿದೆ. ಬೆಂಕಿಗೆ ಕಾರಣವಿನ್ನೂ ತಿಳಿದುಬಂದಿಲ್ಲ ಎಂದು ಸೂರತ್ ಮಹಾನಗರ ಪಾಲಿಕೆ ಅಧಿಕಾರಿಗಳು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News