ಅಫ್ಘಾನಿಸ್ತಾನಕ್ಕೆ 50 ಸಾವಿರ ಟನ್ ಗೋಧಿ ಪೂರೈಸಲು ಭಾರತ ಚಿಂತನೆ

Update: 2021-10-19 04:44 GMT
ಸಾಂದರ್ಭಿಕ ಚಿತ್ರ (source: PTI)

ಹೊಸದಿಲ್ಲಿ, ಅ.19: ಅಫ್ಘಾನಿಸ್ತಾನದಲ್ಲಿ ಆಹಾರಕ್ಕಾಗಿ ಹಾಹಾಕಾರ ಪರಿಸ್ಥಿತಿ ಉದ್ಭವಿಸಿದ್ದು, ಲಕ್ಷಾಂತರ ಮಂದಿ ಹಸಿವಿನಿಂದ ಬಳಲುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತಾಲಿಬಾನ್ ಆಡಳಿತದ ದೇಶಕ್ಕೆ 50 ಸಾವಿರ ಮೆಟ್ರಿಕ್‌ ಟನ್ ಗೋಧಿ ಮತ್ತು ಅಗತ್ಯ ವೈದ್ಯಕೀಯ ಸಲಕರಣೆಗಳನ್ನು ಪೂರೈಸಲು ಭಾರತ ಮುಂದಾಗಿದೆ.

ಆದರೆ ಆಹಾರ ಮತ್ತು ಇತರ ನೆರವನ್ನು ಅಫ್ಘಾನಿಸ್ತಾನಕ್ಕೆ ಸಾಗಿಸುವುದೇ ಭಾರತಕ್ಕೆ ಎದುರಾಗಿರುವ ದೊಡ್ಡ ಸವಾಲು. ಅಫ್ಘಾನಿಸ್ತಾನದಲ್ಲಿ ಮಾನವೀಯ ನೆರವನ್ನು ನೇರವಾಗಿ ಮತ್ತು ಯಾವುದೇ ಅಡೆತಡೆ ಇಲ್ಲದೇ ವಿತರಿಸಲು ಭಾರತ ಬಯಸಿದ್ದು, ವಿಶ್ವಸಂಸ್ಥೆಯ ಕಣ್ಗಾವಲಿನಲ್ಲಿ ಮಾತ್ರ ತಾರತಮ್ಯರಹಿತ ವಿತರಣೆ ಸಾಧ್ಯ ಎನ್ನುವುದು ಭಾರತದ ನಿಲುವಾಗಿದೆ. ಕಳೆದ ತಿಂಗಳು ವಿಶ್ವಸಂಸ್ಥೆಯ ಅಧಿವೇಶನದಲ್ಲಿ ಕೂಡಾ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಭಾರತದ ನೆರವು ಇದಕ್ಕೆ ಸೂಕ್ತ ವಾತಾವರಣ ಸೃಷ್ಟಿಯಾಗುವುದನ್ನು ಅವಲಂಬಿಸಿದೆ.

ವಿಶ್ವಸಂಸ್ಥೆಯ ವಿಶ್ವ ಆಹಾರ ಯೋಜನೆಯಡಿ ಅಫ್ಘಾನಿಸ್ತಾನಕ್ಕಾಗಿ ಭಾರತದಲ್ಲಿ ಗೋಧಿ ಖರೀದಿಗೆ ಭಾರತದ ಅಧಿಕಾರಿಗಳ ಜತೆ ಸಂಪರ್ಕದಲ್ಲಿರುವುದಾಗಿ ಈ ತಿಂಗಳ ಆರಂಭದಲ್ಲಿ ಅಧಿಕಾರಿಗಳು ಹೇಳಿದ್ದರು. ಕಳೆದ ವರ್ಷ ಭಾರತ 75 ಸಾವಿರ ಮೆಟ್ರಿಕ್ ಟನ್ ಗೋಧಿಯನ್ನು ಅಫ್ಘಾನಿಸ್ತಾನಕ್ಕೆ ಪೂರೈಸಿತ್ತು. ಆದರೆ ಸುದೀರ್ಘ ದೂರದ ಚಾಬಹಾರ್ ಬಂದರು ಮೂಲಕ ಇದನ್ನು ಸರಬರಾಜು ಮಾಡಲಾಗಿತ್ತು.

ಅಫ್ಘಾನಿಸ್ತಾನಕ್ಕೆ ನೆರವು ಪೂರೈಸಲು ಇರುವ ಒಂದು ಮಾರ್ಗವೆಂದರೆ, ಅತ್ತಾರಿ- ವಾಘ್ ಗಡಿಯ ಮೂಲಕ ರಸ್ತೆ ಸಾರಿಗೆಯಲ್ಲಿ ಕಳುಹಿಸುವುದು. ಆದರೆ ಭಾರತ ಹಾಗೂ ಅಫ್ಘಾನಿಸ್ತಾನ ನಡುವಿನ ದ್ವಿಮುಖ ವಹಿವಾಟಿಗೆ ಪಾಕಿಸ್ತಾನ ಅವಕಾಶ ನೀಡುತ್ತಿಲ್ಲವಾದ ಕಾರಣ ಇದು ಕೂಡಾ ಸಂಕೀರ್ಣ ಎನಿಸಿದೆ. ಭಾರತಕ್ಕೆ ವಸ್ತುಗಳನ್ನು ರಫ್ತು ಮಾಡಲು ಮಾತ್ರ ಅಫ್ಘಾನಿಸ್ತಾನಕ್ಕೆ ಅವಕಾಶ ನೀಡಲಾಗುತ್ತಿದೆ. ಈ ವಿಚಾರದಲ್ಲಿ ಭಾರತ ಪಾಕ್ ಅಧಿಕಾರಿಗಳ ಜತೆ ಚರ್ಚೆ ನಡೆಸುತ್ತಿದೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News