ವಂಶ ಪಾರಂಪರ್ಯ ರಾಜಕಾರಣ ವಿರೋಧಿಸಿ ಪಕ್ಷ ಸ್ಥಾಪಿಸಿದ್ದ ವೈಕೊ ಉತ್ತರಾಧಿಕಾರಿ ಯಾರು ಗೊತ್ತೇ?

Update: 2021-10-19 04:54 GMT
ದುರೈ ವೈಕೊ

ಚೆನ್ನೈ, ಅ.19: ಎಂಡಿಎಂಕೆ ಪ್ರಧಾನ ಕಾರ್ಯದರ್ಶಿ ವೈಕೊ ಅವರ ಪುತ್ರ ದುರೈ ವೈಕೊ ಅಲಿಯಾಸ್ ವೈಯಾಪುರಿಯವರ ರಾಜಕೀಯ ರಂಗಪ್ರವೇಶಕ್ಕೆ ವೇದಿಕೆ ಸಜ್ಜಾಗಿದ್ದು, ವೈಯಾಪುರಿ, ವೈಕೊ ಅವರ ರಾಜಕೀಯ ಉತ್ತರಾಧಿಕಾರಿಯಾಗಲಿದ್ದಾರೆ.

ದುರೈ ವೈಕೊ ಅವರ ರಾಜಕೀಯ ಪ್ರವೇಶವನ್ನು ಅಧಿಕೃತವಾಗಿ ಪ್ರಕಟಿಸಲು, ಪಕ್ಷದ ಕೇಂದ್ರ ಕಚೇರಿಯಲ್ಲಿ ಪಕ್ಷದ ಜಿಲ್ಲಾ ಕಾರ್ಯದರ್ಶಿಗಳ ಸಭೆಯನ್ನು ಬುಧವಾರ ಕರೆಯಲಾಗಿದೆ.

ಡಿಎಂಕೆ ಅಧ್ಯಕ್ಷ ಎಂ.ಕರುಣಾನಿಧಿ ಅವರು ತಮ್ಮ ಪುತ್ರ ಎಂ.ಕೆ.ಸ್ಟಾಲಿನ್ ಅವರನ್ನು ಉತ್ತರಾಧಿಕಾರಿಯಾಗಿ ಬೆಳೆಸುತ್ತಿದ್ದಾರೆ ಎಂದು ಆಪಾದಿಸಿ ಇದಕ್ಕೆ ಪ್ರತಿರೋಧವಾಗಿ ಪಕ್ಷ ತೊರೆದು ವೈಕೊ ಹೊಸ ಪಕ್ಷ ಸ್ಥಾಪಿಸಿದ್ದರು. ಎಂಡಿಎಂಕೆ ವಂಶ ಪಾರಂಪರ್ಯ ರಾಜಕಾರಣವನ್ನು ವಿರೋಧಿಸಿ ಅಸ್ತಿತ್ವಕ್ಕೆ ಬಂದಿದ್ದ ಮೊದಲ ಪಕ್ಷ ಎನಿಸಿಕೊಂಡಿತ್ತು. ಆದರೆ ಇದೀಗ ಕಾಲಚಕ್ರ ಬದಲಿದ್ದು, ದುರೈ ಅವರನ್ನು ವೈಕೊ ಉತ್ತರಾಧಿಕಾರಿಯಾಗಿ ನೇಮಕ ಮಾಡುತ್ತಿರುವುದು ವಿಪರ್ಯಾಸ.

"ನಮ್ಮ ಜಿಲ್ಲಾ ಘಟಕ ಮಾತ್ರವಲ್ಲದೇ, ರಾಜ್ಯದ 25 ಜಿಲ್ಲಾ ಘಟಕಗಳು, ಪಕ್ಷದ ಹುದ್ದೆಯನ್ನು ದುರೈ ವೈಕೊಗೆ ಮಂಜೂರು ಮಾಡುವಂತೆ ವೈಕೊ ಅವರನ್ನು ಒತ್ತಾಯಸುವ ನಿರ್ಣಯವನ್ನು ಆಂಗೀಕರಿಸಿವೆ" ಎಂದು ಜಿಲ್ಲಾ ಉಸ್ತುವಾರಿ ಹೊಣೆ ಹೊಂದಿರುವ ಮುಖಂಡರೊಬ್ಬರು ಹೇಳಿದ್ದಾರೆ. ಪಕ್ಷದ ಪೂರ್ಣಾವಧಿ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಲು ಅನಾರೋಗ್ಯದ ಕಾರಣ ವೈಕೊಗೆ ಸಾಧ್ಯವಾಗುತ್ತಿಲ್ಲ ಎಂಬ ಹಿನ್ನೆಲೆಯಲ್ಲಿ ದುರೈ ಅವರಿಗೆ ಹುದ್ದೆ ನೀಡಲಾಗುತ್ತಿದೆ ಎಂದು ಮೂಲಗಳು ಹೇಳಿವೆ.

ರಾಜಕೀಯ ಬದ್ಧತೆಗಳು ಈ ನಿರ್ಧಾರಕ್ಕೆ ನಮ್ಮನ್ನು ತಳ್ಳಿವೆ. ಎಂಡಿಎಂಕೆ ಕಾರ್ಯ ನಿರ್ವಹಿಸುತ್ತಿರುವುದು ತಳಮಟ್ಟದ ಬೆಂಬಲ ಮತ್ತು ವೈಕೊ ಅವರ ವರ್ಚಸ್ಸಿನಿಂದ. ಆದ್ದರಿಂದ ದುರೈ ಅವರ ಆಯ್ಕೆ ಅತ್ಯಂತ ಸೂಕ್ತ ಹಾಗೂ ಇಡೀ ಕಾರ್ಯಕರ್ತರ ತಂಡ ದುರೈ ಅವರ ನಾಯಕತ್ವವನ್ನು ಒಪ್ಪಿಕೊಂಡಿದೆ" ಎಂದು ಈ ಆಯ್ಕೆಯನ್ನು ಪಕ್ಷದ ಮುಖಂಡರು ಸಮರ್ಥಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News