×
Ad

ಬಾಂಗ್ಲಾದೇಶದಲ್ಲಿ ಹಿಂದೂ ದೇವಾಲಯಗಳಿಗೆ ದಾಳಿ ಎಂದು ತ್ರಿಪುರಾದ ದೃಶ್ಯಗಳನ್ನು ಶೇರ್‌ ಮಾಡಿದ ಮಾಧ್ಯಮಗಳು

Update: 2021-10-19 19:57 IST

ಹೊಸದಿಲ್ಲಿ: ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳನ್ನು ಗುರಿಯಾಗಿಸಿಕೊಂಡು ಅಲ್ಲಿನ ಮುಸ್ಲಿಮರು ದಾಳಿ ನಡೆಸುತ್ತಿದ್ದು, ಅಲ್ಲಿನ ದುರ್ಗಾ ಪೂಜಾ ಪ್ಯಾಂಡಲ್‌ ಗಳಿಗೆ ಬೆಂಕಿ ಹಾಕಲಾಗಿದೆ ಎಂಬರ್ಥ ಬರುವ ವೀಡಿಯೊವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಲವಾರು ಮಂದಿ ಹಂಚಿಕೊಂಡಿದ್ದಾರೆ. ಇದು ಬಾಂಗ್ಲಾದೇಶದ ರಂಗಪುರದಲ್ಲಿ ನಡೆದಿದೆ ಎಂದು ಉಲ್ಲೇಖಿಸಲಾಗಿದೆ. ಆದರೆ ಇದು ಬಾಂಗ್ಲಾದೇಶದ ವೀಡಿಯೋ ಆಗಿರದೇ ಭಾರತದ ತ್ರಿಪುರಾದ ವೀಡಿಯೋ ಆಗಿದೆ. ಈ ವೀಡಿಯೋವನ್ನು ಹಲವು ಪ್ರಮುಖ ಮಾಧ್ಯಮಗಳು ಪ್ರಕಟಿಸಿವೆ ಎಂದು thequint.com ವರದಿ ಮಾಡಿದೆ.

ಇದೇ ರೀತಿಯ ಘಟನೆಯೊಂದು ರಂಗಪುರದ ಪಿರ್‌ಗಂಜ್‌ ಉಪಜಿಲಾದಲ್ಲಿ ನಡೆದಿದ್ದು, ಅಲ್ಲಿ ಹಿಂದೂ ಸಮುದಾಯದ ಮನೆಯೊಂದರ ಮೇಲೆ ಗುಂಪೊಂದು ದಾಳಿ ನಡೆಸಿತ್ತು. ಆದರೆ ಈ ಪ್ರಕರಣಕ್ಕೆ ಸಂಬಂಧಿಸಿದ ವೀಡಿಯೋ ತ್ರಿಪುರಾದ ಧಲೈನಲ್ಲಿ ನಡೆದ ಘಟನೆಯದ್ದಾಗಿದೆ ಎಂದು ವರದಿ ತಿಳಿಸಿದೆ.

ಬಾಂಗ್ಲಾದೇಶ ಹಿಂದೂ ಯೂನಿಟಿ ಕೌನ್ಸಿಲ್‌ (@unitycouncilBD) ಎಂಬ ದೃಢೀಕೃತ ಟ್ವಿಟರ್‌ ಹ್ಯಾಂಡಲ್‌ ಎರಡು ಟ್ವೀಟ್‌ ಗಳನ್ನು ಪೋಸ್ಟ್‌ ಮಾಡಿದ್ದು. ಅರದಲ್ಲಿ ವೀಡಿಯೊವೊಂದನ್ನು ಪ್ರಕಟಿಸಲಾಗಿದೆ. "ರಂಗಪುರದಲ್ಲಿ ಸದ್ಯ ಪರಿಸ್ಥಿತಿ ಭೀಕರವಾಗಿದೆ. ಹಿಂದೂಗಳ ಮನೆಗಳು ಮತ್ತು ದೇವಸ್ಥಾನಗಳು ಸುಟ್ಟು ಹೋಗಿವೆ. ಮುಸ್ಲಿಂ ಗುಂಪು ರಂಗಪುರ ಜಿಲ್ಲೆಯ ಪಿರ್‌ ಗಂಜ್‌ ಉಪಜಿಲ್ಲೆಯಲ್ಲಿ ಹಿಂದೂ ಗ್ರಾಮಕ್ಕೆ ಬೆಂಕಿ ಹಚ್ಚಿದ್ದಾರೆ" ಎಂದು ಬರೆಯಲಾಗಿತ್ತು.

ಅದೇ ವಿಡಿಯೋ ಮತ್ತು ಟ್ವೀಟ್ ಅನ್ನು ಟಿವಿ 9 ಭಾರತವರ್ಶ್, ದೈನಿಕ್ ಭಾಸ್ಕರ್, ಇಂಡಿಯಾ ಟುಡೇ, ಹಿಂದುಸ್ತಾನ್ ಟೈಮ್ಸ್, ಇಂಡಿಯಾ ಟುಡೇ ಮಲಯಾಳಂ, ಎಬಿಪಿ ನ್ಯೂಸ್, ಲೈವ್ ಮಿಂಟ್ ಮತ್ತು ಒಪಿ ಇಂಡಿಯಾ ತಮ್ಮ ವರದಿಗಳಲ್ಲಿ ಪ್ರಕಟಿಸಿತ್ತು.

ಈ ಕುರಿತು ದಿ ಕ್ವಿಂಟ್‌ ಸತ್ಯ ಶೋಧನೆ ನಡೆಸಿದಾಗ ವರದಿಯೊಂದು ದೊರಕಿದ್ದು, ಇದು ಅಕ್ಟೋಬರ್‌ ೧೪ರ ಸುದ್ದಿಯಾಗಿತ್ತು. ತ್ರಿಪುರಾದ ಧಲೈ ಜಿಲ್ಲೆಯ ಮರಾಶೆರಾ ಮಾರ್ಕೆಟ್‌ ಸಮೀಪದ ದುರ್ಗಾಪೂಜಾ ಪ್ಯಾಂಡಲ್‌ ಗೆ ಮಧ್ಯರಾತ್ರಿ ಬೆಂಕಿ ಹಿಡಿದ ಕುರಿತು ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಬಂಗಾಳಿಯಲ್ಲಿ ಈ ಬಗ್ಗೆ ಸರ್ಚ್‌ ಮಾಡಿದಾಗ ತ್ರಿಪುರಾದ ಪಿಬಿ೨೪ ನ್ಯೂಸ್‌ ಚಾನೆಲ್‌ ನ ಫೇಸ್‌ ಬುಕ್‌ ಪೇಜ್‌ ನಲ್ಲಿ ಅದೇ ವೀಡಿಯೋವನ್ನು ಪ್ರಕಟಿಸಿದ್ದು ಕಂಡು ಬಂದಿತ್ತು.

ಇದೀಗ ತ್ರಿಪುರಾದ ವೀಡಿಯೊವನ್ನು ಬಾಂಗ್ಲಾದೇಶದ್ದೆಂದು ಮೊದಲು ಪ್ರಕಟಿಸಿದ್ದ ಬಾಂಗ್ಲಾದೇಶ ಹಿಂದೂ ಯುನಿಟಿ ಕೌನ್ಸಿಲ್‌ ಖಾತೆಯು ನಕಲಿಯಾಗಿದ್ದು, ಅದಕ್ಕೂ ನಮಗೂ ಯಾವ ಸಂಬಂಧವೂ ಇಲ್ಲ ಎಂದು ಬಾಂಗ್ಲಾದೇಶ ಹಿಂದೂ ಬುದ್ಧಿಶ್ಟ್‌ ಕ್ರಿಶ್ಚಿಯನ್‌ ಯುನಿಟಿ ಕೌನ್ಸಿಲ್‌ ಸ್ಪಷ್ಟಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News