×
Ad

ಸ್ಟೋನ್ ಬದಲಿಗೆ ಕಿಡ್ನಿ ತೆಗೆದ ವೈದ್ಯರು:ಮೃತ ವ್ಯಕ್ತಿಯ ಕುಟುಂಬಕ್ಕೆ 11 ಲಕ್ಷ ರೂ.ಪರಿಹಾರ ನೀಡಲು ಆಸ್ಪತ್ರೆಗೆ ಆದೇಶ

Update: 2021-10-19 20:46 IST
photo: facebook

ಅಹಮದಾಬಾದ್:ಮೂತ್ರಪಿಂಡದ ಕಲ್ಲು ತೆಗೆಯಲು ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯ ಎಡ ಕಿಡ್ನಿಯನ್ನು ವೈದ್ಯರು ತೆಗೆದುಹಾಕಿದ ನಂತರ ವ್ಯಕ್ತಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಗುಜರಾತ್ ರಾಜ್ಯ ಗ್ರಾಹಕರ ವಿವಾದ ಪರಿಹಾರ ಆಯೋಗವು ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ 11 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಆಸ್ಪತ್ರೆಗೆ ಆದೇಶಿಸಿದೆ.

ಮೃತ ದೇವೇಂದ್ರಭಾಯ್ ರಾವಲ್ ಅವರನ್ನು 2011 ರಲ್ಲಿ ಮೂತ್ರಪಿಂಡದ ಕಲ್ಲು ತೆಗೆಯಲು ಬಾಲಸಿನೋರ್‌ನ ಕೆಎಂಜಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಯ ವೈದ್ಯರ ಎಡವಟ್ಟಿನಿಂದಾಗಿ ದೇವೇಂದ್ರಭಾಯ್ ಮೃತಪಟ್ಟಿದ್ದರು.

ಮೃತರ ಸಂಬಂಧಿಯೊಬ್ಬರ ಮನವಿಯನ್ನು ಆಲಿಸಿದ ಗುಜರಾತ್ ರಾಜ್ಯ ಗ್ರಾಹಕರ ವಿವಾದ ಪರಿಹಾರ ಆಯೋಗವು ಮೃತ ವ್ಯಕ್ತಿಯ ಸಂಬಂಧಿಕರಿಗೆ 11.23 ಲಕ್ಷ ರೂ. ಪರಿಹಾರ ನೀಡುವಂತೆ  ಕೆಎಂಜಿ ಜನರಲ್ ಆಸ್ಪತ್ರೆಗೆ ಆದೇಶಿಸಿದೆ. ಆಸ್ಪತ್ರೆಯು ತನ್ನ ಉದ್ಯೋಗಿಯ ನಿರ್ಲಕ್ಷ್ಯಕ್ಕೆ ಹೊಣೆಗಾರಿಕೆಯನ್ನು ಹೊಂದಿದೆ ಎಂದು ಗ್ರಾಹಕರ ಹಕ್ಕುಗಳ ಸಮಿತಿಯು ಹೇಳಿದೆ.

ಗುಜರಾತ್‌ನ ಖೇಡಾ ಜಿಲ್ಲೆಯ ವಂಘ್ರೋಲಿ ಹಳ್ಳಿಯ ನಿವಾಸಿ ದೇವೇಂದ್ರಭಾಯಿ ರಾವಲ್ 2011 ರ ಮೇ ತಿಂಗಳಲ್ಲಿ ತೀವ್ರ ಬೆನ್ನು ನೋವು ಹಾಗೂ  ಮೂತ್ರ ವಿಸರ್ಜನೆಗೆ ತೊಂದರೆ ಅನುಭವಿಸಿದ್ದರು. ಈ ವೇಳೆ ಅವರು ಕೆಎಂಜಿ ಜನರಲ್ ಆಸ್ಪತ್ರೆಯ ವೈದ್ಯರನ್ನು ಸಂಪರ್ಕಿಸಿದಾಗ ರಾವಲ್ ಅವರ ಎಡ ಮೂತ್ರಪಿಂಡದಲ್ಲಿ 15 ಎಂಎಂ ಕಲ್ಲು ಪತ್ತೆಯಾಗಿದೆ.

ರಾವಲ್ ಅವರನ್ನು ಸೆಪ್ಟೆಂಬರ್ 3, 2011 ರಂದು ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿತ್ತು. ಶಸ್ತ್ರಚಿಕಿತ್ಸೆಯ ನಂತರ ವೈದ್ಯರು ಕಲ್ಲಿನ ಬದಲು ರೋಗಿಯ ಎಡ ಮೂತ್ರಪಿಂಡವನ್ನು ತೆಗೆಯಲಾಗಿದೆ. ರೋಗಿಯ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮೃತರ ಕುಟುಂಬಕ್ಕೆ ತಿಳಿಸಿದ್ದರು ಎಂದು ವರದಿಯಾಗಿದೆ.

ಶಸ್ತ್ರಚಿಕಿತ್ಸೆಯ ನಂತರದ ತಿಂಗಳುಗಳಲ್ಲಿ  ಮೂತ್ರ ವಿಸರ್ಜನೆಯೊಂದಿಗೆ ಹೆಚ್ಚಿನ ಸಮಸ್ಯೆಗಳನ್ನು ಅನುಭವಿಸಿದ ಕಾರಣ ದೇವೇಂದ್ರಭಾಯ್ ಅವರನ್ನು ಚಿಕಿತ್ಸೆಗಾಗಿ ನಾಡಿಯಾಡ್‌ನ ಕಿಡ್ನಿ ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಅವರನ್ನು ಅಹಮದಾಬಾದ್‌ನ ಇನ್ಸ್ಟಿಟ್ಯೂಟ್ ಆಫ್ ಕಿಡ್ನಿ ಡಿಸೀಸ್ ಆ್ಯಂಡ್ ರಿಸರ್ಚ್ ಸೆಂಟರ್ (ಐಕೆಡಿಆರ್‌ಸಿ) ಗೆ ಕಳುಹಿಸಲಾಯಿತು. ಅಲ್ಲಿ ಅವರು ಜನವರಿ 8, 2012 ರಂದು ಮೂತ್ರಪಿಂಡದ ತೊಂದರೆಯಿಂದ ಮೃತಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News