ಟ್ವೆಂಟಿ-20 ವಿಶ್ವಕಪ್:ನ್ಯೂಗಿನಿ ವಿರುದ್ಧ ಬಾಂಗ್ಲಾದೇಶಕ್ಕೆ ಭರ್ಜರಿ ಜಯ,ಸೂಪರ್-12ಕ್ಕೆ ಅರ್ಹತೆ

Update: 2021-10-21 14:48 GMT
photo:twitter/@WisdenIndia

ಅಲ್ ಅಮೀರಾತ್: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯ ಮೊದಲ ಸುತ್ತಿನ 'ಎ' ವಿಭಾಗದ 9ನೇ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ ಪಪುವಾ ನ್ಯೂ ಗಿನಿ ತಂಡದ ವಿರುದ್ದ 84 ರನ್ ಗಳ ಭರ್ಜರಿ ಜಯ ದಾಖಲಿಸಿದೆ. ಈ ಮೂಲಕ ಟೂರ್ನಿಯಲ್ಲಿ ಸತತ ಎರಡನೇ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ 4 ಅಂಕ ಗಳಿಸಿದ ಬಾಂಗ್ಲಾ  ಸೂಪರ್-12ರ ಹಂತಕ್ಕೆ ಅರ್ಹತೆ ಪಡೆದುಕೊಂಡಿದೆ.   

ಗುರುವಾರ ನಡೆದ ಪಂದ್ಯದಲ್ಲಿ ಗೆಲ್ಲಲು 182 ರನ್ ಗುರಿ ಪಡೆದ ಪಿಎನ್ ಜಿ ತಂಡವು 19.3 ಓವರ್ ಗಳಲ್ಲಿ ಕೇವಲ 97 ರನ್ ಗಳಿಸಿ ಆಲೌಟಾಯಿತು.  ನ್ಯೂಗಿನಿ ಪರವಾಗಿ ಕಿಪ್ಲಿನ್ ಡೊರಿಗ (ಔಟಾಗದೆ 46)ಗರಿಷ್ಠ ಸ್ಕೋರ್ ಗಳಿಸಿದರು. ಉಳಿದ ಆಟಗಾರರು ಎರಡಂಕೆಯ ಸ್ಕೋರ್ ಗಳಿಸಲು ವಿಫಲರಾದರು. ಬಾಂಗ್ಲಾ ಬೌಲಿಂಗ್ ವಿಭಾಗದಲ್ಲಿ ಆಲ್ ರೌಂಡರ್ ಶಾಕಿಬ್ ಅಲ್ ಹಸನ್(4-9) ಯಶಸ್ವಿ ಬೌಲರ್ ಎನಿಸಿಕೊಂಡರು. ಸೈಫುದ್ದೀನ್(2-21) ಹಾಗೂ ತಸ್ಕಿನ್ ಅಹ್ಮದ್(2-12) ತಲಾ ಎರಡು ವಿಕೆಟ್ ಪಡೆದರು.

ಆಲ್ ರೌಂಡ್ ಪ್ರದರ್ಶನ ನೀಡಿದ ಶಾಕಿಬ್ 'ಪಂದ್ಯಶ್ರೇಷ್ಠ' ಪ್ರಶಸ್ತಿ ಪಡೆದರು.

ಇದಕ್ಕೂ ಮೊದಲು ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ಬಾಂಗ್ಲಾದೇಶ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 181 ರನ್ ಗಳಿಸಿತು. ನಾಯಕ ಮಹಮುದುಲ್ಲಾ(50, 28 ಎಸೆತ, 3 ಬೌಂಡರಿ,3 ಸಿಕ್ಸರ್)ಸರ್ವಾಧಿಕ ಸ್ಕೋರ್ ಗಳಿಸಿದರು. ಆಲ್ ರೌಂಡರ್ ಶಾಕಿಬ್ ಅಲ್ ಹಸನ್(46, 37 ಎಸೆತ, 3 ಸಿಕ್ಸರ್), ಲಿಟನ್ ದಾಸ್(29), ಅಫೀಫ್ ಹೊಸೈನ್(21) ಹಾಗೂ ಸೈಫಿದ್ದೀನ್ (ಔಟಾಗದೆ 19)ಎರಡಂಕೆಯ ಸ್ಕೋರ್ ಗಳಿಸಿದರು.

ಪಿಎನ್ ಜಿ ಪರವಾಗಿ ಕಬುವಾ ಮೊರಿಯ(2-26), ಅಸದ್ ವಾಲಾ(2-26) ಹಾಗೂ ಡಮಿಯೆನ್ ರಾವು(2-40)ತಲಾ ಎರಡು ವಿಕೆಟ್ ಗಳನ್ನು ಕಬಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News