ದ್ವೇಷ ಹರಡುವ ಮೂಲಕ ಉತ್ತರಪ್ರದೇಶದ ಚುನಾವಣೆ ಗೆಲ್ಲಲು ಬಿಜೆಪಿ ತಂತ್ರ ರೂಪಿಸಿದೆ: ಫಾರೂಕ್ ಅಬ್ದುಲ್ಲಾ

Update: 2021-10-21 16:59 GMT

ಜಮ್ಮು, ಅ.21: ಕಳೆದ ಚುನಾವಣೆಯಲ್ಲಿ ಬಿಜೆಪಿ ಬಾಲಕೋಟ್ ದಾಳಿಯ ಹೆಸರಿನಲ್ಲಿ ಗೆಲುವು ಪಡೆದಿದೆ. ಈಗ ಅವರು ಉತ್ತರಪ್ರದೇಶದ ಚುನಾವಣೆ ಗೆಲ್ಲಲು ಜಮ್ಮುವಿನಲ್ಲಿ ದ್ವೇಷ ಹರಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ನ್ಯಾಷನಲ್ ಕಾನ್ಫರೆನ್ಸ್ ಮುಖಂಡ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.

ಬಾಲಕೋಟ್ ದಾಳಿಯ ಬಳಿಕ ಏನಾದರೂ ಬದಲಾಗಿದೆಯೇ? ನಾವು ಪಾಕಿಸ್ತಾನದ ವಶದಲ್ಲಿರುವ ಯಾವುದಾದರೂ ಪ್ರದೇಶವನ್ನು ಮರಳಿ ವಶಕ್ಕೆ ಪಡೆದಿದ್ದೇವಾ? ನಿಯಂತ್ರಣ ರೇಖೆ ಇನ್ನೂ ಅಸ್ತಿತ್ವದಲ್ಲಿದೆ ಎಂದು ಅಬ್ದುಲ್ಲಾ ಹೇಳಿದ್ದಾರೆ. ದ್ವೇಷ ಹರಡುವ ಮೂಲಕ ಉತ್ತರಪ್ರದೇಶದ ಚುನಾವಣೆ ಗೆಲ್ಲಲು ಬಿಜೆಪಿ ತಂತ್ರ ರೂಪಿಸಿದೆ. ಆದ್ದರಿಂದ ಜನತೆ ದ್ವೇಷದ ವಿರುದ್ಧ ಹೋರಾಡಿ ಜಮ್ಮು ಕಾಶ್ಮೀರ ಮತ್ತು ದೇಶವನ್ನು ರಕ್ಷಿಸಬೇಕಾಗಿದೆ. ಒಂದು ವೇಳೆ ದ್ವೇಷತ್ವ ಇದೇ ರೀತಿ ವೃದ್ಧಿಸುತ್ತಾ ಹೋದರೆ ದೇಶ ಒಡೆದುಹೋಗುವುದನ್ನು ತಪ್ಪಿಸಲಾಗದು.

ಕೋಮುವಾದದ ವಿರುದ್ಧ ನಾವು ಹೋರಾಡಬೇಕಿದೆ. ಹಿಂದು-ಮುಸ್ಲಿಮರ ಮಧ್ಯೆ ನಿರ್ಮಿಸಲಾದ ದ್ವೇಷದ ಗೋಡೆಯನ್ನು ಉರುಳಿಸಬೇಕಾಗಿದೆ ಎಂದು ಜಮ್ಮುವಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಅವರು ಹೇಳಿದರು. ಜಮ್ಮು ಕಾಶ್ಮೀರ ಒಡೆದುಹೋಗದಂತೆ ನ್ಯಾಷನಲ್ ಕಾನ್ಫರೆನ್ಸ್ ರಕ್ಷಿಸಬಹುದು. ಈ ರಾಜ್ಯವನ್ನು ಒಡೆಯಬಹುದು ಎಂದು ಬಿಜೆಪಿ ಸರಕಾರ ಯೋಚಿಸಿದ್ದರೆ ಅವರಿಗೆ ಒಂದು ಮಾತನ್ನು ಹೇಳಬಯಸುತ್ತೇನೆ ‘ಎಚ್ಚರಿಕೆ. ಇಂತಹ ಪೂರ್ವಾಗ್ರಹ ಭಾವನೆ ಇರಿಸಿಕೊಳ್ಳಬೇಡಿ. ಹೀಗಾದರೆ ಈ ದೇಶ ಉಳಿಯದು.’ ಎಂದು ಅಬ್ದುಲ್ಲಾ ಹೇಳಿದರು.

ನಮ್ಮಲ್ಲಿ ಸಹೋದರತ್ವದ ಭಾವನೆ ಇರಬೇಕು. ಭಾರತಕ್ಕೆ ಹೊರಗಿನಿಂದ ಬೆದರಿಕೆಯಿಲ್ಲ, ಆದರೆ ದೇಶದೊಳಗೆ ಭ್ರಾತೃತ್ವದ ಭಾವನೆ ನಶಿಸಿದರೆ ಆಗ ದೇಶದೊಳಗಿಂದಲೇ ಬೆದರಿಕೆ ಆರಂಭವಾಗುತ್ತದೆ. ನಾವು ಒಳಗಿಂದಲೇ ಬಲಿಷ್ಟವಾಗಿದ್ದರೆ ಚೀನಾ ಮತ್ತು ಪಾಕಿಸ್ತಾನದಿಂದ ಏನೂ ಮಾಡಲಾಗದು. ಆದ್ದರಿಂದ ಭ್ರಾತೃತ್ವವನ್ನು ಬಲಿಷ್ಟಗೊಳಿಸಿ ಮತ್ತು ದೇಶವನ್ನು ಬಲಿಷ್ಟಗೊಳಿಸಿ ಎಂದವರು ಜನತೆಗೆ ಸಲಹೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News