ಎನ್‌ಸಿಪಿ ನಾಯಕ ಏಕನಾಥ ಖಡ್ಸೆಗೆ ಮಧ್ಯಂತರ ರಕ್ಷಣೆ ನೀಡಿದ ಹೈಕೋರ್ಟ್

Update: 2021-10-21 17:54 GMT

ಮುಂಬೈ,ಅ.21: ಪುಣೆ ಭೂ ವ್ಯವಹಾರಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಾಂಬೆ ಉಚ್ಚ ನ್ಯಾಯಾಲಯವು ಗುರುವಾರ ಎನ್‌ಸಿಪಿ ನಾಯಕ ಹಾಗೂ ಮಹಾರಾಷ್ಟ್ರದ ಮಾಜಿ ಸಚಿವ ಏಕನಾಥ ಖಡ್ಸೆ ಅವರಿಗೆ ಬಂಧನದಿಂದ ಒಂದು ವಾರದ ಅವಧಿಗೆ ಮಧ್ಯಂತರ ರಕ್ಷಣೆಯನ್ನು ನೀಡಿದೆ.

ಬಂಧನ ಪೂರ್ವ ಜಾಮೀನು ಕೋರಿ ಖಡ್ಸೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನಡೆಸಿದ ನ್ಯಾ.ಎನ್.ಡಬ್ಲು.ಸಾಂಬ್ರೆ ಅವರ ಏಕ ನ್ಯಾಯಾಧೀಶ ಪೀಠವು ನಿಯಮಿತ ಜಾಮೀನು ಕೋರಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವಂತೆ ಅವರಿಗೆ ನಿರ್ದೇಶ ನೀಡಿತು.

ಜಾರಿ ನಿರ್ದೇಶನಾಲಯ (ಈ.ಡಿ.)ವು ಪ್ರಕರಣದಲ್ಲಿ ಆರೋಪ ಪಟ್ಟಿಯನ್ನು ಈಗಾಗಲೇ ಸಲ್ಲಿಸಿದ್ದು,ತನ್ನೆದುರು ಹಾಜರಾಗುವಂತೆ ವಿಶೇಷ ನ್ಯಾಯಾಲಯವು ಈ ತಿಂಗಳ ಆರಂಭದಲ್ಲಿ ಖಡ್ಸೆಯವರಿಗೆ ಸಮನ್ಸ್ ಜಾರಿಗೊಳಿಸಿತ್ತು.
ಖಡ್ಸೆ ನಿಯಮಿತ ಜಾಮೀನಿಗಾಗಿ ವಿಶೇಷ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ ಎಂಬ ಈ.ಡಿ.ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ ಸಿಂಗ್ ಅವರ ವಾದವನ್ನು ಪುರಸ್ಕ್ಕರಿಸಿದ ನ್ಯಾ.ಸಾಂಬ್ರೆ,ಒಂದು ವಾರದೊಳಗೆ ವಿಶೇಷ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸುವಂತೆ ಖಡ್ಸೆಯವರಿಗೆ ಮತ್ತು ಒಂದು ವಾರದವರೆಗೆ ಅವರನ್ನು ಕಸ್ಟಡಿಗೆ ತೆಗೆದುಕೊಳ್ಳದಂತೆ ಹಾಗೂ ಜಾಮೀನು ಅರ್ಜಿಯನ್ನು ತ್ವರಿತವಾಗಿ ಇತ್ಯರ್ಥಗೊಳಿಸುವಂತೆ ವಿಶೇಷ ನ್ಯಾಯಾಲಯಕ್ಕೆ ನಿರ್ದೇಶಗಳನ್ನು ನೀಡಿದರು.

 ಪ್ರಕರಣದಲ್ಲಿ ಖಡ್ಸೆಯವರ ಜೊತೆಗೆ ಅವರ ಪತ್ನಿ ಮಂದಾಕಿನಿ ಮತ್ತು ಅಳಿಯ ಗಿರೀಶ ಚೌಧರಿ ಅವರೂ ಆರೋಪಿಗಳಾಗಿದ್ದಾರೆ. ಕೆಲವು ತಿಂಗಳ ಹಿಂದೆ ಚೌಧರಿಯನ್ನು ಬಂಧಿಸಲಾಗಿದ್ದು,ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ.


 2016ರಲ್ಲಿ ಚೌಧರಿ ಮತ್ತು ಖಡ್ಸೆ ಪುಣೆ ಸಮೀಪದ ಭೋಸಾರಿಯಲ್ಲಿ 31.01 ಕೋ.ರೂ.ಗಳ ವಾಸ್ತವ ಮೌಲ್ಯವನ್ನು ಹೊಂದಿದ್ದ ಸರಕಾರಿ ಭೂಮಿಯನ್ನು 3.75 ಕೋ.ರೂ.ಗಳಿಗೆ ಖರೀದಿಸಿದ್ದರು ಎಂದು ಈ.ಡಿ.ಆರೋಪಿಸಿದೆ. ಆಗ ರಾಜ್ಯದ ಕಂದಾಯ ಸಚಿವರಾಗಿದ್ದ ಖಡ್ಸೆ,ವ್ಯವಹಾರವನ್ನು ಸುಗಮಗೊಳಿಸಲು ತನ್ನ ಅಧಿಕಾರದ ದುರುಪಯೋಗವನ್ನು ಮಾಡಿಕೊಂಡಿದ್ದರು ಎಂದೂ ಅದು ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News