ಭಯೋತ್ಪಾದಕರಿಂದ ಕೊಲ್ಲಲ್ಪಟ್ಟ ಇನ್ಸ್‌ಪೆಕ್ಟರ್ ಮನೆಗೆ ಭೇಟಿ ನೀಡಿದ ಅಮಿತ್ ಶಾ

Update: 2021-10-23 11:53 GMT
Photo: Twitter/@AmitShah

ಶ್ರೀನಗರ: ಮೂರು ದಿನಗಳ ಭೇಟಿಗಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಬೆಳಗ್ಗೆ ಜಮ್ಮು-ಕಾಶ್ಮೀರಕ್ಕೆ ಬಂದಿಳಿದಿದ್ದು, ಎರಡು ವರ್ಷಗಳ ಹಿಂದೆ ಕೇಂದ್ರ ಸರಕಾರವು ಆರ್ಟಿಕಲ್ 370 ಅನ್ನು ರದ್ದುಗೊಳಿಸಿದ ನಂತರ ಶಾ  ಮೊದಲ ಬಾರಿ ಕಾಶ್ಮೀರ ಕಣಿವೆಗೆ ಭೇಟಿ ನೀಡಿದ್ದಾರೆ.

ಕಳೆದ ತಿಂಗಳು ಭಯೋತ್ಪಾದಕರಿಂದ ಕೊಲ್ಲಲ್ಪಟ್ಟ ದಿವಂಗತ ಇನ್ಸ್‌ಪೆಕ್ಟರ್ ಪರ್ವೇಝ್ ಅಹ್ಮದ್ ಅವರ ಮನೆಗೆ ಭೇಟಿ ನೀಡುವ ಮೂಲಕ ಗೃಹ ಸಚಿವರು ತಮ್ಮಕಾಶ್ಮೀರ  ಪ್ರವಾಸವನ್ನು ಆರಂಭಿಸಿದರು. ಸರಕಾರಿ ಕೆಲಸಕ್ಕೆ ಸಂಬಂಧಿಸಿದ ಕಾಗದ ಪತ್ರಗಳನ್ನು ಅಹ್ಮದ್ ಅವರ ಪತ್ನಿಗೆ ಹಸ್ತಾಂತರಿಸಿದರು. ಶಾ ಅವರ ಭೇಟಿಯ ವೇಳೆ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ಕೇಂದ್ರ ಸಚಿವ ಜಿತೇಂದ್ರ ಸಿಂಗ್  ಹಾಗೂ  ಡಿಜಿಪಿ ದಿಲ್ಬಾಗ್ ಸಿಂಗ್ ಅವರ ಜೊತೆಗಿದ್ದರು.

ಶ್ರೀನಗರ ವಿಮಾನ ನಿಲ್ದಾಣದಲ್ಲಿ ಶಾ ಅವರನ್ನು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಹಾಗೂ ಜಮ್ಮು ಮತ್ತು ಕಾಶ್ಮೀರ ಆಡಳಿತದ ಇತರ ಹಿರಿಯ ಅಧಿಕಾರಿಗಳು ಬರಮಾಡಿಕೊಂಡರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಣಿವೆಯಲ್ಲಿ ನಾಗರಿಕರ ಸರಣಿ ಹತ್ಯೆಗಳು ನಡೆಯುತ್ತಿರುವ ಸಮಯದಲ್ಲಿ ಶಾ ಅವರು  ಭೇಟಿ ನೀಡಿದ್ದಾರೆ. ಭದ್ರತೆ ಕುರಿತು ಅವರು ರಾಜ್ ಭವನದಲ್ಲಿ ಏಕೀಕೃತ ಕಮಾಂಡ್ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಭೆಯಲ್ಲಿ ನಾಲ್ಕು ಕಾರ್ಪ್ಸ್ ಕಮಾಂಡರ್‌ಗಳು, ಜಮ್ಮು-ಕಾಶ್ಮೀರ ಪೊಲೀಸ್ ಉನ್ನತ ಅಧಿಕಾರಿಗಳು ಹಾಗೂ  ಗುಪ್ತಚರ ಬ್ಯೂರೋ ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ಮುಖ್ಯಸ್ಥರು ಇತರ ಉನ್ನತ ಅಧಿಕಾರಿಗಳು ಭಾಗವಹಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News