ಮಹಾರಾಷ್ಟ್ರ ಮಾದಕ ದ್ರವ್ಯದ ಕೇಂದ್ರವಾಗುತ್ತಿದೆ ಎಂಬ ಭಾವನೆ ಸೃಷ್ಟಿಸಲಾಗುತ್ತಿದೆ: ಉದ್ಧವ್ ಠಾಕ್ರೆ

Update: 2021-10-23 17:38 GMT

ಮುಂಬೈ, ಅ. 23: ಮಹಾರಾಷ್ಟ್ರ ಮಾದಕ ದ್ರವ್ಯದ ಕೇಂದ್ರವಾಗುತ್ತಿದೆ ಎಂಬ ಭಾವನೆ ಸೃಷ್ಟಿಸಲಾಗುತ್ತಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಶುಕ್ರವಾರ ಮಾದಕ ದ್ರವ್ಯ ನಿಯಂತ್ರಣ ಬ್ಯುರೋ (ಎನ್ಸಿಬಿ)ವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ‘‘ಮಹಾರಾಷ್ಟ್ರದಲ್ಲಿ ಮಾದಕ ದ್ರವ್ಯದ ಅಲೆಯೇ ಇದೆ, ಜಗತ್ತಿಗೆ ಬೇಕಾದ ಮಾದಕ ದ್ರವ್ಯಗಳನ್ನು ಮಹಾರಾಷ್ಟ್ರದಲ್ಲಿಯೇ ಉತ್ಪಾದಿಸಲಾಗುತ್ತಿದೆ.

ಈ ದಂಧೆಗೆ ವಿಶೇಷ ತನಿಖಾ ತಂಡ ಅಡ್ಡಿ ಉಂಟು ಮಾಡಿದೆ ಎಂಬ ಭಾವನೆ ಸೃಷ್ಟಿಸಲಾಗುತ್ತಿದೆ. ಆದರೆ, ಇದು ಸತ್ಯವಲ್ಲ’’ ಎಂದು ಉದ್ಧವ್ ಠಾಕ್ರೆ ಅವರು ಹೇಳಿದ್ದಾರೆ. ಅವರು ನಾಗಪುರದಲ್ಲಿ ಮೊದಲ ವನ್ಯಜೀವಿ ಡಿಎನ್ಎ ಪರೀಕ್ಷೆಯ ಪ್ರಯೋಗಾಲಯ ಹಾಗೂ ಮುಂಬೈ, ಪುಣೆ, ನಾಗಪುರದಲ್ಲಿರುವ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಮಾನವ ಡಿಎನ್ಎ ಮಾದರಿ ಪರೀಕ್ಷೆಗೆ ನಿರ್ಭಯಾ ಯೋಜನೆ ಅಡಿಯಲ್ಲಿ ಆರಂಭಿಸಲಾದ ಮೂರು ತ್ವರಿತ ಡಿಎನ್ಎ ಪರೀಕ್ಷಾ ಘಟಕಗಳ ಆನ್ಲೈನ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

‘‘ಕೆಲವು ದಿನಗಳ ಹಿಂದೆ ಮುಂಬೈ ಪೊಲೀಸರು 25 ಕೋಟಿ ರೂಪಾಯಿ ಅಂದಾಜು ಮೌಲ್ಯದ ಹೆರಾಯಿನ್ ಅನ್ನು ವಶಪಡಿಸಿಕೊಂಡಿದ್ದಾರೆ. ಆದರೆ, ಇದರಲ್ಲಿ ಯಾವುದೇ ಹಿರೋಯಿನ್ ಭಾಗಿಯಾಗಿರಲಿಲ್ಲ. ಆದುದರಿಂದ ಯಾರೊಬ್ಬರೂ ಇದರ ಬಗ್ಗೆ ಮಾತನಾಡಲಿಲ್ಲ. ಕಾರ್ಯಾಚರಣೆ ನಡೆಸಿದ ಪೊಲೀಸರ ಬಗ್ಗೆ ಕೂಡ ಯಾರೊಬ್ಬರೂ ತಿಳಿಯಲಿಲ್ಲ. ನಾವು ಅವರನ್ನು ಅಭಿನಂದಿಸಬೇಕು’’ ಎಂದು ಠಾಕ್ರೆ ಹೇಳಿದರು. ಮಹಾರಾಷ್ಟ್ರ ಪೊಲೀಸ್ ಕಠಿಣ, ಸ್ಪರ್ಧಾತ್ಮಕ ಪಡೆ. ಕಾನೂನು ಉಲ್ಲಂಘಿಸುವವರ ವಿರುದ್ಧ ಯಾವುದೇ ಮೃಧು ಧೋರಣೆ ತಾಳದೆ ಕಠಿಣ ಕ್ರಮ ತೆಗೆದುಕೊಳ್ಳುತ್ತದೆ ಎಂದು ಅವರು ಹೇಳಿದರು. ಮಹಾರಾಷ್ಟ್ರ ಪೊಲೀಸರ ವರ್ಚಸ್ಸಿಗೆ ಮಸಿ ಬಳೆಯುವ ಪ್ರಯತ್ನ ನಡೆಯುತ್ತಿದೆ. ಈ ಪ್ರಯತ್ನವನ್ನು ನಾವು ನಿಲ್ಲಿಸಲಿದ್ದೇವೆ ಎಂದು ಉದ್ಧವ್ ಠಾಕ್ರೆ ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News