'ರತ್ನನ್ ಪ್ರಪಂಚ': ಇದು ಅವ್ವಂದಿರ ಪ್ರಪಂಚ..!

Update: 2021-10-23 19:30 GMT

'ರತ್ನನ್ ಪ್ರಪಂಚ' ಎಂದೊಡನೆ ಕನ್ನಡಿಗರಿಗೆ ಇರುವುದರಲ್ಲೇ ತೃಪ್ತಿ ಪಡುವವರ ಬಗ್ಗೆ ನೆನಪಾಗುತ್ತದೆ. ಜೆ.ಪಿ.ರಾಜರತ್ನಂ ಕವನಗಳು ಮೂಡಿಸಿರುವ ಪ್ರಭಾವ ಅದು. ಆದರೆ ಈ ಚಿತ್ರದಲ್ಲಿ ರತ್ನಾಕರ ಎನ್ನುವ ಯುವಕ ತನ್ನ ಕೌಟುಂಬಿಕ ಪ್ರಪಂಚದ ಬಗ್ಗೆ ಇನ್ನಷ್ಟು ಅರಿತುಕೊಳ್ಳುವ ಕತೆ ಇದು.

ಆತನ ತಾಯಿಯ ಹೆಸರು ಸರೋಜ. ರತ್ನಾಕರ ತನ್ನ ತಾಯಿಯನ್ನು ಹೆಸರಿನಿಂದಲೇ ಕರೆಯುತ್ತಿರುತ್ತಾನೆ. ತಾಯಿಯನ್ನು ಹೆಸರಲ್ಲೇ ಕರೆಯುವ ಸಾಕಷ್ಟು ಸಿನೆಮಾ ನೀವು ನೋಡಿರಬಹುದು. ಆದರೆ ಅಲ್ಲಿರುವಷ್ಟು ಪ್ರೀತಿಯ ನಾಟಕೀಯತೆ ಇಲ್ಲಿ ಕಾಣಿಸದು. ತಾಯಿ ಸ್ವಲ್ಪರಫ್ ಆ್ಯಂಡ್ ಟಫ್ ಎಂದೇ ಹೇಳಬೇಕು. ಆದರೆ ಅಂತಹದ್ದೊಂದು ಸಂಬಂಧದೊಳಗೆ ತಾನು ಆ ತಾಯಿಗೆ ದತ್ತು ಪುತ್ರ ಎಂದು ಅರಿವಾದಾಗ ಪುತ್ರನ ಮನಸ್ಸಿಗೆ ಏನಾಗಬಹುದು? ನಿರೀಕ್ಷೆಯಂತೆ ಆತನಿಗೆ ತನ್ನ ಹೆತ್ತ ತಾಯಿಯನ್ನು ನೋಡುವ ಹಂಬಲ ಹೆಚ್ಚುತ್ತದೆ. ಆದರೆ ಆನಂತರ ನಡೆಯುವುದೆಲ್ಲ ಸಾಮಾನ್ಯ ಪ್ರೇಕ್ಷಕನ ನಿರೀಕ್ಷೆಗಳನ್ನು ಮೀರಿದ ಘಟನೆಗಳು. ಹಾಗಾಗಿ ಕತೆ ಕೂಡ ಆಸಕ್ತಿದಾಯಕವಾಗಿ ಸಾಗುತ್ತದೆ.
ಚಿತ್ರದಲ್ಲಿ ರತ್ನಾಕರನಾಗಿ ಧನಂಜಯ್ ಜೀವಿಸಿದ್ದಾರೆ. ಅವರ ವೃತ್ತಿಬದುಕಿನ ಪಾತ್ರಗಳಲ್ಲಿ ವೈವಿಧ್ಯವನ್ನು ಕಾಪಾಡಿರುವುದಕ್ಕೆ ಇದೊಂದು ಉತ್ತಮ ಉದಾಹರಣೆ. ಆದರೂ ಒಟ್ಟು ಚಿತ್ರವನ್ನು ಗಮನಿಸಿದಾಗ ಮನದಲ್ಲಿ ಉಳಿಯುವುದು ಸರೋಜಳಾಗಿ ಉಮಾಶ್ರೀ ಮತ್ತು ಎಲ್ಲವ್ವಳಾಗಿ ಶ್ರುತಿ ನಿರ್ವಹಿಸಿರುವ ತಾಯಿಯ ಪಾತ್ರಗಳು ಮಾತ್ರ. ಹೇಳಿಕೇಳಿ ಇದು ತಾಯಿ ಮಕ್ಕಳ ಅನುಬಂಧದ ಕತೆ. ಹಾಗಾಗಿ ಒಂದೇ ದೃಶ್ಯದಲ್ಲಿ ಕಾಣಿಸುವ ಮತ್ತೋರ್ವ ತಾಯಿ ಪಾತ್ರಧಾರಿ ಶೋಭಾ ರಾಘವೇಂದ್ರ ಕೂಡ ಮನದಲ್ಲೇ ಉಳಿಯುತ್ತಾರೆ.
ಸಿನೆಮಾದ ಕತೆ ಮಾತ್ರವಲ್ಲ, ಒಂದು ಹಂತದವರೆಗೆ ಸಂಭಾಷಣೆ ಕೂಡ ನೈಜವಾಗಿ, ಆಕರ್ಷಕವಾಗಿದೆ. ಆದರೆ ಚಿತ್ರಕತೆಯ ವಿಚಾರಕ್ಕೆ ಬಂದರೆ ಆ ಮಾತು ಹೇಳುವಂತಿಲ್ಲ. ಯಾಕೆಂದರೆ ಮಧ್ಯದಲ್ಲಿ ಬರುವ ಅನುಪ್ರಭಾಕರ್ ಎಪಿಸೋಡ್ ಆರಂಭದ ಓಘಕ್ಕೆ ಹೋಲಿಸಿದರೆ ತೀರ ನೀರಸವಾಗಿದೆ.
ರವಿಶಂಕರ್ ಗೌಡ ಜೊತೆಗೆ ಅನು ಪ್ರಭಾಕರ್ ಅಂತಹ ನಟಿ ಇದ್ದರೂ ಆ ದೃಶ್ಯಗಳು ಹೆಚ್ಚೇನೂ ಪರಿಣಾಮ ಬೀರದಿರುವುದು ವಿಪರ್ಯಾಸ. ಆದರೆ ರತ್ನಾಕರನ ಹುಡುಕಾಟದ ಪಯಣದಲ್ಲಿ ಬಳಿಕ ಎದುರಾಗುವ ಉಡಾಳ್ ಬಾಬು ಒಂದಷ್ಟು ಹೊತ್ತು ನಾಯಕನನ್ನೇ ಮರೆಸುವಂತೆ ಅಬ್ಬರಿಸುತ್ತಾರೆ, ಆವರಿಸುತ್ತಾರೆ. ಆದರೆ ಅಲ್ಲಿ ಕೂಡ ಹಾಡೊಂದು ನುಸುಳಿಕೊಂಡು ಬಂದಾಗ ಇದು ಅಗತ್ಯ ಇರಲಿಲ್ಲ ಅನಿಸುವುದು ಸತ್ಯ.
ಇತರ ಪಾತ್ರಗಳ ಬಗ್ಗೆ ಹೇಳುವಾಗ ಪೋಷಕ ಪಾತ್ರಗಳನ್ನು ನಿರ್ವಹಿಸಿರುವ ಅಚ್ಯುತ್ ಕುಮಾರ್, ಜಹಾಂಗೀರ್ ಮೊದಲಾದವರ ಜೊತೆಗೆ ನಾಯಕಿ ಮಯೂರಿ ಪಾತ್ರಧಾರಿ ರೆಬಾ ಮೋನಿಕಾ ಜಾನ್ ಕೂಡ ನೆನಪಲ್ಲಿ ಉಳಿಯುತ್ತಾರೆ. ತಾಂತ್ರಿಕ ವಿಚಾರಕ್ಕೆ ಸಂಬಂಧಿಸಿದಂತೆ ಅಜನೀಶ್ ಲೋಕನಾಥ್ ಅವರ ಹಿನ್ನೆಲೆ ಸಂಗೀತ ಭಾವನಾತ್ಮಕ ಸನ್ನಿವೇಶಗಳಲ್ಲಿ ನೀಡಿದ ಕೊಡುಗೆಯನ್ನು ಸ್ಮರಿಸಲೇಬೇಕು.
ಒಟ್ಟಿನಲ್ಲಿ ಬೇರೆ ಬೇರೆಯಾದ ಕುಟುಂಬದ ಸದಸ್ಯರು ಒಂದಾಗಿ ಸೇರುವುದು ಹಳೆಯ ಕಾನ್ಸೆಪ್ಟ್. ಆದರೆ ಅದನ್ನು ತೀರ ಹೊಸದಾಗಿ ಹೃದಯಕ್ಕೆ ಹತ್ತಿರವಾಗುವಂತೆ ಹೇಳುವಲ್ಲಿ 'ರತ್ನನ್ ಪ್ರಪಂಚ'ದ ಮೂಲಕ ನಿರ್ದೇಶಕರು ಗೆದ್ದಿದ್ದಾರೆ.

ನಿರ್ದೇಶನ: ರೋಹಿತ್ ಪದಕಿ
ನಿರ್ಮಾಣ: ಕಾರ್ತಿಕ್ ಗೌಡ, ಯೋಗಿ ಜಿ. ರಾಜ್
ತಾರಾಗಣ: ಧನಂಜಯ, ರೆಬಾ ಮೋನಿಕಾ ಜಾನ್, ಉಮಾಶ್ರೀ, ಶ್ರುತಿ ಮೊದಲಾದವರು

Writer - ಶಶಿಕರ ಪಾತೂರು

contributor

Editor - ಶಶಿಕರ ಪಾತೂರು

contributor

Similar News