ಸುಡಾನ್‌ನಲ್ಲಿ ಕ್ಷಿಪ್ರಕ್ರಾಂತಿ ಪ್ರಧಾನಿ ಬಂಧನ; ತುರ್ತುಪರಿಸ್ಥಿತಿ ಘೋಷಣೆ

Update: 2021-10-25 16:51 GMT
photo:twitter/@AFP

ಖರ್ಟೂಮ್, ಅ.25: ಸುಡಾನ್‌ನಲ್ಲಿ ಸೇನಾ ಮುಖ್ಯಸ್ಥ ಜನರಲ್ ಅಬ್ದುಲ್ ಫತಾಹ್ ಬರ್ಹಾನ್ ನೇತೃತ್ವದಲ್ಲಿ ಸೋಮವಾರ ಕ್ಷಿಪ್ರಕ್ರಾಂತಿ ನಡೆದಿದ್ದು ಹಂಗಾಮೀ ಪ್ರಧಾನಿ ಅಬ್ದಲ್ಲಾ ಹಮ್ದೊಕ್ ಸಹಿತ ಸಚಿವ ಸಂಪುಟದ ಪ್ರಮುಖರನ್ನು ಬಂಧಿಸಲಾಗಿದೆ. ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದ್ದು ಇಂಟರ್‌ನೆಟ್ ಸಂಪರ್ಕವನ್ನು ಸ್ಥಗಿತಗೊಳಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಸೋಮವಾರ ರಾಷ್ಟ್ರೀಯ ಟಿವಿ ವಾಹಿನಿಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಜನರಲ್ ಬರ್ಹಾನ್, ಆಡಳಿತ ನಡೆಸುತ್ತಿರುವ ಉನ್ನತ ಸಮಿತಿ ಹಾಗೂ ಪ್ರಧಾನಿ ಅಬ್ದುಲ್ಲಾ ಹಮ್ದೋಕ್ ನೇತೃತ್ವದ ಸರಕಾರವನ್ನು ವಿಸರ್ಜಿಸಲಾಗಿದೆ ಎಂದು ಘೋಷಿಸಿದ್ದಾರೆ. ರಾಜಕೀಯ ಪಕ್ಷಗಳ ನಡುವಿನ ಜಗಳ ತಾರಕಕ್ಕೇರಿದ್ದರಿಂದ ಸೇನೆಯ ಮಧ್ಯಪ್ರವೇಶ ಅನಿವಾರ್ಯವಾಗಿತ್ತು. ಸಲಹೆಗಾರರನ್ನು ಒಳಗೊಂಡ ನೂತನ ಸರಕಾರವನ್ನು ರಚಿಸಲಾಗುತ್ತಿದ್ದು ಅದರ ನೇತೃತ್ವದಲ್ಲಿ ದೇಶದಲ್ಲಿ ಚುನಾವಣೆ ನಡೆಯಲಿದೆ ಎಂದವರು ಘೋಷಿಸಿದ್ದಾರೆ.

ಅಬ್ದಲ್ಲಾ ಹಮ್ದೋಕ್ ಹಾಗೂ ಅವರ ಪತ್ನಿಯನ್ನು ರಹಸ್ಯ ಸ್ಥಳಕ್ಕೆ ಕರೆದೊಯ್ಯಲಾಗಿದೆ. ಕೈಗಾರಿಕಾ ಸಚಿವ ಇಬ್ರಾಹಿಂ ಅಲ್‌ಶೇಖ್, ಮಾಹಿತಿ ಸಚಿವ ಹಮ್ಝಾ ಬಲೂಲ್, ಸೊವರಿನ್ ಸಮಿತಿಯ ಸದಸ್ಯ ಮುಹಮ್ಮದ್ ಅಲ್‌ಫಿಕಿ ಸುಲೈಮಾನ್, ಹಮ್ದೋಕ್‌ರ ಮಾಧ್ಯಮ ಸಲಹೆಗಾರ ಫೈಸಲ್ ಮುಹಮ್ಮದ್ ಸಲೇಹ್ ಸಹಿತ ಸಚಿವ ಸಂಪುಟದ ಹಲವು ಮುಖಂಡರನ್ನೂ ಬಂಧಿಸಲಾಗಿದ್ದು ಅವರ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ ಎಂದು ಪ್ರಧಾನಿ ಕಚೇರಿಯ ಹೇಳಿಕೆ ತಿಳಿಸಿದೆ. ದೇಶದೆಲ್ಲೆಡೆ ಇಂಟರ್‌ನೆಟ್ ಸಂಪರ್ಕ ಸ್ಥಗಿತಗೊಂಡಿದೆ.

ಸರಕಾರಿ ನೇತೃತ್ವದ ಟಿವಿ ವಾಹಿನಿಯ ಕಚೇರಿಗೆ ನುಗ್ಗಿದ ಸೇನೆ ಅಲ್ಲಿನ ಹಲವು ಉದ್ಯೋಗಿಗಳನ್ನು ಬಂಧಿಸಿದೆ. ಬಳಿಕ ಟಿವಿ ವಾಹಿನಿಯಲ್ಲಿ ಸಾಂಪ್ರದಾಯಿಕ ದೇಶಭಕ್ತಿ ಗೀತೆ ಪ್ರಸಾರವಾಗುತ್ತಿದೆ ಎಂದು ಸುಡಾನ್‌ನ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹೇಳಿದೆ. ಕಳೆದ ತಿಂಗಳೂ ಸುಡಾನ್‌ನಲ್ಲಿ ಸೇನೆಯ ಕ್ಷಿಪ್ರಕ್ರಾಂತಿಗೆ ವಿಫಲ ಪ್ರಯತ್ನ ನಡೆದಿತ್ತು. ಸುಡಾನ್‌ನಲ್ಲಿ ಸೊವರಿನ್ ಸಮಿತಿ ಆಡಳಿತದ ಬಗ್ಗೆ ಪ್ರಮುಖ ನಿರ್ಧಾರ ಕೈಗೊಳ್ಳುತ್ತಿದ್ದು ಸಮಿತಿಗೆ ಅಬ್ದುಲ್ ಫತಾಹ್ ಬರ್ಹಾನ್ ಅಧ್ಯಕ್ಷರಾಗಿದ್ದಾರೆ.

ಆದರೆ ಹಂಗಾಮಿ ಪ್ರಧಾನಿ ಹಮ್ದೋಕ್ ಆಡಳಿತದ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿದ್ದು ಹಲವು ಪ್ರಮುಖ ನಿರ್ಧಾರಗಳನ್ನು ಅವರ ಸಚಿವ ಸಂಪುಟ ಕೈಗೊಂಡಿದ್ದ ಬಗ್ಗೆ ಬರ್ಹಾನ್ ಅಸಮಾಧಾನಗೊಂಡಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ಮಧ್ಯೆ, ಕ್ಷಿಪ್ರಕ್ರಾಂತಿಯ ಮಾಹಿತಿ ಪ್ರಸಾರವಾಗುತ್ತಿದ್ದಂತೆಯೇ ದೇಶದ ಪ್ರಜಾಪ್ರಭುತ್ವ ಪರವಾಗಿರುವ ಪಕ್ಷಗಳು ಹಾಗೂ 2 ಪ್ರಮುಖ ರಾಜಕೀಯ ಪಕ್ಷಗಳು ಬೀದಿಗಿಳಿದು ಪ್ರತಿಭಟಿಸುವಂತೆ ಜನತೆಗೆ ಕರೆ ನೀಡಿವೆ. ಬಳಿಕ ಅವಳಿ ನಗರಗಳಾದ ರಾಜಧಾನಿ ಖರ್ಟೂಮ್ ಮತ್ತು ಒಮ್ಡರ್‌ಮನ್‌ನಲ್ಲಿ ಸಾವಿರಾರು ಮಂದಿ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.

 ರಸ್ತೆತಡೆ ನಡೆಸಿ ಟೈರ್‌ಗಳಿಗೆ ಬೆಂಕಿಹಚ್ಚಿದ ಪ್ರತಿಭಟನಾಕಾರರನ್ನು ಚದುರಿಸಲು ಭದ್ರತಾ ಪಡೆಗಳು ಅಶ್ರುವಾಯು ಪ್ರಯೋಗಿಸಿದ್ದು ಕನಿಷ್ಟ 12 ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ. ‘ಜನತೆ ಸಶಕ್ತವಾಗಿದ್ದಾರೆ. ಹಿಂಜರಿಯುವುದು ನಮ್ಮ ಆಯ್ಕೆಯಲ್ಲ’ ಎಂದು ಆಕ್ರೋಶಿತ ಪ್ರತಿಭಟನಾಕಾರರು ಘೋಷಣೆ ಕೂಗುತ್ತಿರುವ ವೀಡಿಯೊ ವೈರಲ್ ಆಗಿದೆ. ಸುಡಾನ್‌ನಲ್ಲಿ ದೀರ್ಘಾವಧಿ ಅಧಿಕಾರದಲ್ಲಿದ್ದ ಸರ್ವಾಧಿಕಾರಿ ಓಮರ್ ಅಲ್‌ಬಶೀರ್ 2 ವರ್ಷದ ಹಿಂದೆ ದೇಶದಲ್ಲಿ ನಡೆದ ಬೃಹತ್ ಪ್ರತಿಭಟನೆಯ ಬಳಿಕ ಪದತ್ಯಾಗ ಮಾಡಿದ್ದರು. ಆ ಬಳಿಕ ಪ್ರಜಾಪ್ರಭುತ್ವ ಮಾದರಿಯ ಆಡಳಿತ ವ್ಯವಸ್ಥೆಯತ್ತ ಸಾಗುತ್ತಿರುವ ಸುಡಾನ್‌ನಲ್ಲಿ ಇತ್ತೀಚೆಗೆ ರಾಜಕೀಯ ಅಸ್ಥಿರತೆ ಹೆಚ್ಚಿದೆ.

ಬಶೀರ್ ಪದತ್ಯಾಗದ ಬಳಿಕ , ಸೇನಾಧಿಕಾರಿಗಳು ಹಾಗೂ ನಾಗರಿಕ ಪ್ರತಿನಿಧಿಗಳನ್ನೊಳಗೊಂಡ ಸೊವರಿನ್ ಸಮಿತಿ(ಉನ್ನತ

ಸಮಿತಿ)ಯ ರಚನೆಯಾಗಿದ್ದು ಈ ಸಮಿತಿ ಆಡಳಿತದ ಪ್ರಮುಖ ನಿರ್ಣಯ ಕೈಗೊಳ್ಳುತ್ತದೆ. ಉನ್ನತ ಸಮಿತಿಯ ಕೈಯಲ್ಲಿರುವ ಅಧಿಕಾರವನ್ನು ಪ್ರಜಾಪ್ರಭುತ್ವ ಸರಕಾರಕ್ಕೆ ಹಸ್ತಾಂತರಿಸುವುದಾಗಿ ಸೇನಾ ಮುಖ್ಯಸ್ಥ ಬರ್ಹಾನ್ ಇತ್ತೀಚೆಗಷ್ಟೇ ಘೋಷಿಸಿದ್ದರು. ಸುಡಾನ್‌ನಲ್ಲಿ ಸೋಮವಾರ ಸಂಭವಿಸಿರುವ ಬೆಳವಣಿಗೆಗಳ ಬಗ್ಗೆ ಅಮೆರಿಕ ಮತ್ತು ಯುರೋಪಿಯನ್ ಯೂನಿಯನ್ ತೀವ್ರ ಆತಂಕ ವ್ಯಕ್ತಪಡಿಸಿವೆ.

ನಾಗರಿಕ ಪ್ರತಿನಿಧಿಗಳು ಹಾಗೂ ಸೇನಾ ಮುಖಂಡರ ನಡುವೆ ಹೆಚ್ಚುತ್ತಿರುವ ಭಿನ್ನಾಭಿಪ್ರಾಯಗಳನ್ನು ನಿವಾರಿಸುವ ಉದ್ದೇಶದಿಂದ ಕಳೆದ ವಾರಾಂತ್ಯ ಸುಡಾನ್‌ಗೆ ಭೇಟಿ ನೀಡಿದ್ದ ಅಮೆರಿಕದ ವಿಶೇಷ ಪ್ರತಿನಿಧಿ ಜೆಫ್ರೀ ಫೆಲ್ಟ್‌ಮ್ಯಾನ್, ಸುಡಾನ್‌ನ ಬೆಳವಣಿಗೆಯನ್ನು ತೀವ್ರ ಆತಂಕದಿಂದ ಗಮನಿಸುತ್ತಿರುವುದಾಗಿ ಟ್ವೀಟ್ ಮಾಡಿದ್ದಾರೆ. ಹಮ್ದೋಕ್ ಸಹಿತ ಬಂಧನಲ್ಲಿರುವ ಮುಖಂಡರನ್ನು ತಕ್ಷಣ ಬಿಡುಗಡೆಗೊಳಿಸಬೇಕು. ಮಾತುಕತೆ ಮತ್ತು ಸಹಮತದಿಂದ ಮಾತ್ರ ದೇಶವನ್ನು ರಕ್ಷಿಸಬಹುದು ಎಂದು ಆಫ್ರಿಕನ್ ಯೂನಿಯನ್ ಕರೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News