​ಪುಲ್ವಾಮಾ ಸಿಆರ್‌ಪಿಎಫ್ ಶಿಬಿರದಲ್ಲಿ ರಾತ್ರಿ ಕಳೆದ ಅಮಿತ್ ಶಾ

Update: 2021-10-26 03:52 GMT

ಶ್ರೀನಗರ: ಭಯೋತ್ಪಾದನೆ ಬಗ್ಗೆ ಶೂನ್ಯ ಸಹಿಷ್ಣುತೆ ನೀತಿಯನ್ನು ನರೇಂದ್ರ ಮೋದಿ ಸರ್ಕಾರ ಹೊಂದಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಸ್ಥಿತಿ ಗಣನೀಯವಾಗಿ ಸುಧಾರಿಸಿದೆ ಎಂದು ಗೃಹಸಚಿವ ಅಮಿತ್ ಶಾ ಹೇಳಿದ್ದಾರೆ. ಆದರೆ ಸಂಪೂರ್ಣ ಶಾಂತಿ ಸಾಧಿಸುವವರೆಗೂ ನಾವು ತೃಪ್ತಿಪಟ್ಟುಕೊಳ್ಳಬಾರದು ಎಂದು ಅವರು ಕಿವಿಮಾತು ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರಕ್ಕೆ ಮೂರು ದಿನಗಳ ಭೇಟಿಗೆ ಆಗಮಿಸಿದ್ದ ಅವರು ಪುಲ್ವಾಮಾ ಸಿಆರ್‌ಪಿಎಫ್ ಶಿಬಿರದಲ್ಲಿ ರಾತ್ರಿಯನ್ನು ಕಳೆದರು.

2019ರಲ್ಲಿ ಇದೇ ಸ್ಥಳದಲ್ಲಿ ಕಾರು ಬಾಂಬ್ ದಾಳಿಯಲ್ಲಿ 40 ಮಂದಿ ಅರೆ ಮಿಲಿಟರಿ ಸಿಬ್ಬಂದಿಯನ್ನು ಹತ್ಯೆ ಮಾಡಲಾಗಿತ್ತು. "ನಿಮ್ಮ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು ನಾನು ಒಂದು ರಾತ್ರಿಯನ್ನು ನಿಮ್ಮ ಜತೆ ಕಳೆಯಲು ಬಯಸಿದ್ದೇನೆ" ಎಂದು ಸಿಆರ್‌ಪಿಎಫ್ ಕ್ಯಾಂಪಸ್‌ನಲ್ಲಿ ಭದ್ರತಾ ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಹೇಳಿದರು. ಈ ಕೇಂದ್ರಾಡಳಿತ ಪ್ರದೇಶಕ್ಕೆ ನೀಡಿದ ಭೇಟಿಯಲ್ಲಿ ಇದು ಮಹತ್ವದ ಅಂಶ ಎಂದು ಅವರು ಬಣ್ಣಿಸಿದರು.

ಜಮ್ಮು ಮತ್ತು ಕಾಶ್ಮೀರದಲ್ಲಿ ಕಾನೂನು ಹಾಗೂ ಸುವ್ಯವಸ್ಥೆ ಗಣನೀಯವಾಗಿ ಸುಧಾರಿಸಿದೆ ಎಂದ ಅವರು, ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯಂತೆ ನಮ್ಮ ಜೀವಿತಾವಧಿಯಲ್ಲೇ ಶಾಂತಿಯುತ ಜಮ್ಮು ಮತ್ತು ಕಾಶ್ಮೀರವನ್ನು ವಾಸ್ತವಗೊಳಿಸಲು ಸಾಧ್ಯವಾಗಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

"ಅವರತ್ತ ನಾವು ನೋಡಿದಾಗಲೆಲ್ಲ ಕಲ್ಲು ತೂರಾಟ ಮಾತ್ರ ಕಾಣುತ್ತಿತ್ತು. ಕಲ್ಲುತೂರಾಟ ಕಾಶ್ಮೀರದಲ್ಲಿ ಸಾಮಾನ್ಯವಾಗಿದ್ದ ಒಂದು ಕಾಲ ಇತ್ತು. ಇಂಥ ಘಟನೆಗಳು ದೊಡ್ಡ ಮಟ್ಟದಲ್ಲಿ ಕಡಿಮೆಯಾಗಿವೆ. ಆದರೆ ಅಷ್ಟಕ್ಕೇ ಸಮಾಧಾನಪಟ್ಟುಕೊಳ್ಳಬಾರದು ಎಂದು ಹೇಳಬಯಸುತ್ತೇನೆ. ನರೇಂದ್ರ ಮೋದಿ ಸರ್ಕಾರ ಭಯೋತ್ಪಾದನೆ ಬಗ್ಗೆ ಶೂನ್ಯ ಸಹಿಷ್ಣುತೆ ಹೊಂದಿದೆ. ಅದನ್ನು ನಾವು ಸಹಿಸಲಾಗದು. ಅದು ಮಾನವೀಯತೆಗೆ ವಿರುದ್ಧ. ಮಾನವತೆಯ ವಿರುದ್ಧ ಹೇಯ ಕೃತ್ಯಗಳನ್ನು ಎಸಗುವವರಿಂದ ಜಮ್ಮು ಮತ್ತು ಕಾಶ್ಮೀರದ ಜನತೆಯನ್ನು ರಕ್ಷಿಸುವುದು ನಮ್ಮ ಆದ್ಯತೆಯಾಗಬೇಕು" ಎಂದು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News