ಖೇಲ್‌ ರತ್ನದ ಹೆಸರನ್ನು ಪ್ರಧಾನಿ ಟ್ವೀಟ್‌ ಕಾರಣದಿಂದ ಬದಲಾಯಿಸಲಾಗಿತ್ತೇ ಹೊರತು ಜನರ ಆಗ್ರಹದಿಂದಲ್ಲ: ವರದಿ

Update: 2021-10-26 11:34 GMT

ಹೊಸದಿಲ್ಲಿ: ಈ ವರ್ಷದ ಆಗಸ್ಟ್ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ, ತಮಗೆ ದೇಶಾದ್ಯಂತ ನಾಗರಿಕರಿಂದ ಬಹಳಷ್ಟು ಮನವಿಗಳು ಬಂದಿರುವ ಕಾರಣ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಎಂದು  ಮರುಹೆಸರಿಸಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದ್ದರು.

ಈ ಕ್ರಮ ಸಾಕಷ್ಟು ಟೀಕೆಗೆ ಕಾರಣವಾಗಿತ್ತು. ಈ ಪ್ರಶಸ್ತಿಗೆ ಮರುನಾಮಕರಣ ಮಾಡಲು ಎಷ್ಟು ಮನವಿಗಳು ಬಂದಿವೆ ಎಂಬ ಕುರಿತು 'ದಿ ವೈರ್' ಮಾಧ್ಯಮವು ಆರ್‍ಟಿಐ ಅರ್ಜಿ ಸಲ್ಲಿಸಿತ್ತು. ಆದರೆ ಅಂತಹ ಯಾವುದೇ ಮಾಹಿತಿ ಇಲ್ಲವೆಂದು ಅಧಿಕಾರಿಗಳು  ಉತ್ತರಿಸಿದ್ದಾಗಿ thewire.in ವರದಿ ಮಾಡಿದೆ.

ಆದರೆ ಈ ಪ್ರಶಸ್ತಿಗೆ ಮರುನಾಮಕರಣಗೊಳಿಸಲು ಕ್ರೀಡಾ ಸಚಿವಾಲಯವು ಪ್ರಧಾನಿಯ ಟ್ವೀಟ್ ನಂತರವೇ ನಿರ್ಧರಿಸಿತ್ತೆಂಬ ಅಂಶ ಈಗ ಬಯಲಾಗಿದೆ. ಈ ಕುರಿತಾದ ತಪ್ಪು ತಪ್ಪಾಗಿ ಬರೆಯಲಾಗಿದ್ದ ಸುತ್ತೋಲೆಯೊಂದನ್ನೂ ಸಚಿವಾಲಯ ಅವಸವಸರವಾಗಿ ಹೊರಡಿಸಿತ್ತೆಂಬುದೂ ಬಹಿರಂಗಗೊಂಡಿದೆ.

Full ViewMajor DhyanChand Award Files by The Wire

ಮರುನಾಮಕರಣಕ್ಕೆ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕುರ್ ಅವರು ಅನುಮತಿ ನೀಡಿರುವ ಪತ್ರ ಸಾಕಷ್ಟು ತಪ್ಪುಗಳನ್ನು ಹೊಂದಿದೆ. ಈ ಕುರಿತಾದ ಕಡತಗಳಲ್ಲೂ ಮೊದಲು ಪ್ರಧಾನಿಯ ಟ್ವೀಟ್ ಇದ್ದು ನಂತರ ಅದರ ಆಧಾರದಲ್ಲಿ ಪ್ರಶಸ್ತಿ ಹೆಸರು ಬದಲಾವಣೆಗೆ ಕ್ರಮಕೈಗೊಳ್ಳಲಾಗಿತ್ತು ಎಂಬುದು ತಿಳಿದು ಬಂದಿದೆ.

ಪ್ರಶಸ್ತಿಯನ್ನು ಮರುನಾಮಕರಣ ಮಾಡುವಂತೆ ಸಾರ್ವಜನಿಕರಿಂದ ಬಂದ ಮನವಿಗಳಿಗೆ ಸಂಬಂಧಿಸಿದಂತೆ ತಮ್ಮ ಬಳಿ ಯಾವುದೇ ದಾಖಲೆಗಳಿಲ್ಲ ಎಂದು ಸಚಿವಾಲಯ ಅಧಿಕೃತವಾಗಿ ಒಪ್ಪಿಕೊಂಡಿದೆ. ಪ್ರಧಾನ ಮಂತ್ರಿಗೆ ಬರೆಯಲಾದ ಯಾವುದೇ ಪತ್ರವನ್ನು ಅದರ ವಿಷಯದ ಆಧಾರದ ಮೇಲೆ ವಿಲೇವಾರಿ ಮಾಡಲು ಸಂಬಂಧಿಸಿದ ಸಚಿವಾಲಯ ಅಥವಾ ಇಲಾಖೆಗೆ ವರ್ಗಾಯಿಸಲಾಗುತ್ತದೆ. 

ದಿ ವೈರ್ ಆಗಸ್ಟ್ 8, 2021 ರಂದು ಆರ್‌ಟಿಐ ಅರ್ಜಿಯನ್ನು ಸಲ್ಲಿಸಿತ್ತು, ಅದರಲ್ಲಿ ಪ್ರಶಸ್ತಿಯ ಹೆಸರು ಬದಲಾವಣೆ ನಡೆಸುವಂತೆ ಕೋರಿ ಎಷ್ಟು ವಿನಂತಿಗಳನ್ನು ಪಿಎಂಒ ಸ್ವೀಕರಿಸಿದೆ ಎಂದು ತಿಳಿಸಬೇಕಾಗಿ ಉಲ್ಲೇಖಿಸಿತ್ತು. ಈ ಮನವಿ ಪತ್ರಗಳ ನಕಲು ಪ್ರತಿಗಳನ್ನೂ ಕೋರಲಾಗಿತ್ತು.

ಈ ಸಂಬಂಧ ರಾಜ್ಯಗಳು ಅಥವಾ ಕೇಂದ್ರಾಡಳಿತ ಪ್ರದೇಶಗಳು, ಭಾರತೀಯ ರಾಷ್ಟ್ರೀಯ ಕ್ರೀಡಾ ಒಕ್ಕೂಟ, ಭಾರತೀಯ ಕ್ರೀಡಾ ಪ್ರಾಧಿಕಾರ, ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಮುಂತಾದ ಸಂಬಂಧಪಟ್ಟ ಮಧ್ಯಸ್ಥಗಾರರೊಂದಿಗೆ ಯಾವುದೇ ಸಮಾಲೋಚನೆ ನಡೆಸಿಲ್ಲ ಎಂಬುದು ದಾಖಲೆಗಳಿಂದ ಸ್ಪಷ್ಟವಾಗಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News