ಲಂಚ ಆರೋಪ, ಸಾಕ್ಷಿ ಹೇಳಿಕೆಗೂ ನನಗೂ ಯಾವುದೇ ಸಂಬಂಧ ಇಲ್ಲ: ಆರ್ಯನ್ ಖಾನ್

Update: 2021-10-26 16:14 GMT

ಹೊಸದಿಲ್ಲಿ, ಅ. 26: ಪ್ರಯಾಣಿಕ ಹಡಗಿನಲ್ಲಿ ಮಾದಕ ದ್ರವ್ಯ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ತನ್ನ ಹಾಗೂ ಇತರರ ವಿರುದ್ಧ ತನಿಖೆ ನಡೆಸುತ್ತಿರುವ ಎನ್ಸಿಬಿಯ ಮುಖ್ಯ ಅಧಿಕಾರಿ ಸಮೀರ್ ವಾಂಖೆಡೆ ಅವರ ಮೇಲಿನ ಆರೋಪಕ್ಕೂ ತನಗೂ ಯಾವುದೇ ಸಂಬಂಧ ಇಲ್ಲ ಎಂದು ಪ್ರಕರಣದ ಆರೋಪಿ ಆರ್ಯನ್ ಖಾನ್ ಹೇಳಿದ್ದಾರೆ. ಅಲ್ಲದೆ, ಎನ್ಸಿಬಿ ಅಧಿಕಾರಿಗಳೊಂದಿಗೆ ಯಾವುದೇ ಒಪ್ಪಂದವನ್ನು ಅವರು ನಿರಾಕರಿಸಿದ್ದಾರೆ. 

‘‘ಪ್ರಸಕ್ತ ಸಾರ್ವಜನಿಕ/ಸಾಮಾಜಿಕ ಮಾಧ್ಯಮದಲ್ಲಿ ಸಮೀರ್ ವಾಂಖೆಡೆ ಹಾಗೂ ನಿರ್ದಿಷ್ಟ ರಾಜಕೀಯ ವ್ಯಕ್ತಿಗಳ ನಡುವಿನ ಆರೋಪ, ಪ್ರತ್ಯಾರೋಪಗಳಿಗೂ ನನಗೂ ಯಾವುದೇ ಸಂಬಂಧ ಇಲ್ಲ. ಅಲ್ಲದೆ, ಪ್ರಭಾಕರ್ ಸೈಲ್ ಅಥವಾ ಕೆ.ಪಿ. ಗೋಸಾವಿ ಅವರ ಬಗ್ಗೆ ಯಾವುದೇ ರೀತಿಯ ಕಾಳಜಿ ಆಗಲಿ, ಸಂಬಂಧ ಆಗಲಿ ಇಲ್ಲ’’ ಎಂದು ಬಾಂಬೆ ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ ಅಫಿಡಾವಿಟ್ ನಲ್ಲಿ ಆರ್ಯನ್ ಖಾನ್ ತಿಳಿಸಿದ್ದಾರೆ. 

ಆರ್ಯನ್ ಖಾನ್ ಹೇಳಿಕೆ ಅನುಸರಿಸಿ ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ ಅಫಿಡಾವಿಟ್ ನಲ್ಲಿ ಎನ್ಸಿಬಿ, ಲಂಚದ ಆರೋಪ ಮಾಡುವಂತೆ ಸ್ವತಂತ್ರ ಸಾಕ್ಷಿಯಾಗಿರುವ ಪ್ರಭಾಕರ್ ಸೈಲ್ಗೆ ಆರ್ಯನ್ ಖಾನ್ ಅವರ ತಂದೆ ಶಾರುಕ್ ಖಾನ್ ಮ್ಯಾನೇಜರ್ ಪ್ರಭಾವ ಬೀರಿದಂತೆ ಕಾಣುತ್ತದೆ ಎಂದು ಪ್ರತಿಪಾದಿಸಿದೆ.

ಆರ್ಯನ್ ಖಾನ್ ಡ್ರಗ್ಸ್ ಸೇವಿಸುವುದಲ್ಲದೆ, ಸಾಗಾಟದಲ್ಲಿ ಭಾಗಿಯಾಗಿದ್ದಾರೆ: ಹೈಕೋರ್ಟ್ ತಿಳಿಸಿದ ಎನ್ಸಿಬಿ 

ಪ್ರಯಾಣಿಕ ಹಡಗಿನಲ್ಲಿ ಮಾದಕ ದ್ರವ್ಯವನ್ನು ವಶಪಡಿಸಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾಗಿರುವ ಆರ್ಯನ್ ಖಾನ್ ಅವರ ಜಾಮೀನಿಗೆ ವಿರೋಧ ವ್ಯಕ್ತಪಡಿಸಿರುವ ಎನ್ಸಿಬಿ, ಆರ್ಯನ್ ಖಾನ್ ಕೇವಲ ಮಾದಕದ್ರವ್ಯ ಸೇವಿಸುವುದಿಲ್ಲ, ಬದಲಾಗಿ ಮಾದಕ ದ್ರವ್ಯ ಸಾಗಾಟದಲ್ಲಿ ಕೂಡ ಭಾಗಿಯಾಗಿದ್ದಾರೆ ಎಂದು ಮಂಗಳವಾರ ಹೇಳಿದ್ದಾರೆ. ತನಿಖೆಯ ದಾರಿತಪ್ಪಿಸುವ ಉದ್ದೇಶದಿಂದ ಪುರಾವೆ ಹಾಗೂ ಸಾಕ್ಷಿಗಳನ್ನು ತಿರುಚುವ ಕೆಲಸವನ್ನು ಆರ್ಯನ್ ಖಾನ್, ಪೂಜಾ ದದ್ಲಾನಿ ಹಾಗೂ ಶಾರುಕ್ ಖಾನ್ ಅವರ ಮ್ಯಾನೇಜರ್ ಮಾಡುತ್ತಿದ್ದಾರೆ ಎಂದು ಎನ್ಸಿಬಿ ಪ್ರತಿಪಾದಿಸಿದೆ. ‌

ಇನ್ನೊಂದೆಡೆ ಆರ್ಯನ್ ಖಾನ್ ಅವರ ವಕೀಲ ಉಚ್ಚ ನ್ಯಾಯಾಲಯಕ್ಕೆ ಹೆಚ್ಚುವರಿ ಟಿಪ್ಪಣಿ ಸಲ್ಲಿಸಿ ಎನ್ಸಿಬಿಯ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಹಾಗೂ ನಿರ್ದಿಷ್ಟ ರಾಜಕೀಯ ವ್ಯಕ್ತಿಗಳ ನಡುವಿನ ಆರೋಪ, ಪ್ರತ್ಯಾರೋಪಗಳಿಗೂ ಆರ್ಯನ್ ಖಾನ್ ಗೂ ಯಾವುದೇ ಸಂಬಂಧ ಇಲ್ಲ ಎಂದು ಪ್ರತಿಪಾದಿಸಿದ್ದಾರೆ. ಆರ್ಯನ್ ಖಾನ್ ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದ ಜಾಮೀನು ಅರ್ಜಿಗೆ ಪ್ರತಿಕ್ರಿಯೆಯಾಗಿ ಎನ್ಸಿಬಿ ಮಂಗಳವಾರ ತನ್ನ ಅಫಿಡಾವಿಟ್ ಸಲ್ಲಿಸಿದೆ. ಅಲ್ಲದೆ, ತನಿಖೆಯ ದಾರಿ ತಪ್ಪಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News