ಹುದ್ದೆಗಾಗಿ ಸಮೀರ್‌ ವಾಂಖೆಡೆ ತಮ್ಮ ಧರ್ಮದ ಕುರಿತು ಸುಳ್ಳು ಹೇಳಿದ್ದರು: ವಿವಾಹ ದಾಖಲೆ ಬಿಡುಗಡೆ ಮಾಡಿದ ನವಾಬ್‌ ಮಲಿಕ್

Update: 2021-10-27 11:19 GMT

ಮುಂಬೈ: ಆರ್ಯನ್ ಖಾನ್ ಪ್ರಕರಣದ ತನಿಖೆ ನಡೆಸುತ್ತಿರುವ ಎನ್‍ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೇಡೆ ಅವರದ್ದೆಂದು ಹೇಳಲಾದ ವಿವಾಹ ಪ್ರಮಾಣಪತ್ರದ ಪ್ರತಿಯನ್ನು ಎನ್‍ಸಿಪಿ ನಾಯಕ ಹಾಗೂ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಇಂದು ಟ್ವೀಟ್ ಮಾಡಿದ್ದಾರೆ. ಈ ಪ್ರಮಾಣಪತ್ರದಲ್ಲಿ ಎನ್‍ಸಿಬಿ ಅಧಿಕಾರಿಯ ಹೆಸರು ಸಮೀರ್ ದಾವೂದ್ ವಾಂಖೇಡೆ ಎಂದಿದೆ.

ಅಕ್ಟೋಬರ್ 25ರಂದು ಸಮೀರ್ ವಾಂಖೇಡೆ ಅವರದ್ದೆಂದು ಹೇಳಲಾದ ಜನನ ಪ್ರಮಾಣಪತ್ರದ ಪ್ರತಿಯನ್ನೂ ಟ್ವೀಟ್ ಮಾಡಿದ್ದ ಮಲಿಕ್ ಅದರಲ್ಲಿ ವಾಂಖೇಡೆ ಅವರು ಮುಸ್ಲಿಂ ಸಮುದಾಯಕ್ಕೆ ಸೇರಿದವರೆಂದು ನಮೂದಿತವಾಗಿರುವುದನ್ನು ಉಲ್ಲೇಖಿಸಿದ್ದಾರೆ. ‌

``ಸಮೀರ್ ದಾವೂದ್ ವಾಂಖೇಡೆ ಅವರ ತಂದೆ ದಲಿತರಾಗಿದ್ದರೆ ಅವರು ಮುಸ್ಲಿಂ ಮಹಿಳೆಯನ್ನು ವಿವಾಹವಾಗಿ ನಂತರ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿದ್ದರು. ಆದರೆ ಸಮೀರ್ ಅವರು ತಮ್ಮ  ಜನನ ಪ್ರಮಾಣಪತ್ರವನ್ನು ಫೋರ್ಜರಿ ಮಾಡಿ ಪರಿಶಿಷ್ಟ ಜಾತಿ ವಿಭಾಗದಲ್ಲಿ ಉದ್ಯೋಗ ಗಿಟ್ಟಿಸಿದ್ದಾರೆ. ಕಾನೂನಿನ ಪ್ರಕಾರ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ದಲಿತರಿಗೆ ಮೀಸಲಾತಿ ದೊರೆಯುವುದಿಲ್ಲ," ಎಂದು ಮಲಿಕ್ ಹೇಳಿದ್ದಾರೆ.

ಬುಧವಾರ ಮಲಿಕ್ ಅವರು ವಾಂಖೇಡೆ ಅವರು ಶಬಾನ ಖುರೇಶಿ ಎಂಬ ಮಹಿಳೆಯೊಂದಿಗೆ ಆದ ಮೊದಲ ವಿವಾಹದ ಫೋಟೋ ಕೂಡ ಟ್ವೀಟ್ ಮಾಡಿದ್ದಾರೆ. "ಇಲ್ಲಿ ಧರ್ಮದ ವಿಚಾರವಲ್ಲ.  ಅವರು ಐಆರ್ಎಸ್ ಕೆಲಸ ಗಿಟ್ಟಿಸಲು ವಂಚನೆ ಮೂಲಕ ಜಾತಿ ಪ್ರಮಾಣಪತ್ರ ಪಡೆದು ಅರ್ಹ ಪರಿಶಿಷ್ಟ ವರ್ಗದ ವ್ಯಕ್ತಿಯೊಬ್ಬರನ್ನು ಅವಕಾಶವಂಚಿತರನ್ನಾಗಿಸಿದ್ದಾರೆ" ಎಂದು ಮಲಿಕ್ ಟ್ವೀಟ್ ಮಾಡಿದ್ದಾರೆ.

ತಾವು ಟ್ವಿಟ್ಟರ್‍ನಲ್ಲಿ  ಸುಳ್ಳು ದಾಖಲೆಗಳನ್ನು ಹಾಜರುಪಡಿಸಿದ್ದೇನೆಂಬುದು ಸಾಬೀತಾದರೆ ರಾಜಕೀಯ ತೊರೆಯುವುದಾಗಿಯೂ ಅವರು ಹೇಳಿದ್ದಾರೆ. "ಸಮೀರ್ ವಾಂಖೇಡೆ ಅವರು ಜನರಿಂದ ಕ್ಷಮೆಯಾಚಿಸಿ ತಾವು ದಾಖಲೆಗಳನ್ನು ತಿದ್ದಿದ್ದನ್ನು ಒಪ್ಪಿಕೊಳ್ಳಬೇಕು. ಅವರಿಗೆ ರಾಜೀನಾಮೆ ನೀಡಲು ನಾನು ಹೇಳುವುದಿಲ್ಲ, ಆದರೆ ಕಾನೂನಿನ ಪ್ರಕಾರ ಅವರು ತಮ್ಮ ಉದ್ಯೋಗ ಕಳೆದುಕೊಳ್ಳುತ್ತಾರೆ" ಎಂದು ಮಲಿಕ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News