ಹಸಿವು ಸೂಚ್ಯಂಕಕ್ಕೆ ಮಿತಿಗಳಿರಬಹುದು, ಆದರೆ ಭಾರತದಲ್ಲಿ ಸಮಸ್ಯೆಗಳಿವೆ ಎನ್ನುವುದಕ್ಕೆ ಸಾಕಷ್ಟು ಪುರಾವೆಗಳಿವೆ

Update: 2021-10-27 14:45 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ,ಅ.27: ಜಾಗತಿಕ ಹಸಿವು ಸೂಚ್ಯಂಕ (ಜಿಎಚ್ಐ) ಪಟ್ಟಿಯಲ್ಲಿ 116 ದೇಶಗಳ ಪೈಕಿ ಭಾರತವು 101ನೇ ಸ್ಥಾನದಲ್ಲಿದೆ. ಹಿಂಸಾಚಾರಗಳಿಂದ ತತ್ತರಿಸಿರುವ ಅಫ್ಘಾನಿಸ್ತಾನ ನಮಗಿಂತ ಎರಡೇ ಸ್ಥಾನ ಹಿಂದಿದ್ದರೆ ಪ್ರಜಾಪ್ರಭುತ್ವ ಎಂದರೇನು ಎನ್ನುವುದು ಗೊತ್ತೇ ಇಲ್ಲದ ಉತ್ತರ ಕೊರಿಯಾ ನಮಗಿಂತ ಮೇಲೆ,96ನೇ ಸ್ಥಾನದಲ್ಲಿದೆ. ಕೃಶತೆ (ಎತ್ತರಕ್ಕೆ ಅನುಗುಣವಾಗಿ ತೂಕ ಇಲ್ಲದಿರುವುದು)ಯಲ್ಲಿ ಜಾಗತಿಕ ಪಟ್ಟಿಯಲ್ಲಿ ಭಾರತ ಅತ್ಯಂತ ಕನಿಷ್ಠ ಸ್ಥಾನದಲ್ಲಿದೆ. ಕುಬ್ಜತೆ (ವಯಸ್ಸಿಗೆ ಅನುಗುಣವಾಗಿ ಎತ್ತರವಿಲ್ಲದಿರುವುದು)ಯ ವಿಷಯದಲ್ಲಿಯೂ ಭಾರತದ ಸ್ಥಿತಿ ಭಿನ್ನವಾಗಿಲ್ಲ. ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಜಿಎಚ್ಐ ಅನ್ನು ಸಿದ್ಧಪಡಿಸುವ ವಿಧಾನವನ್ನು ಪ್ರಶ್ನಿಸುವ ಮೂಲಕ ಚರ್ಚೆಗೆ ನಾಂದಿ ಹಾಡಿದೆ.

ಭಾರತದಲ್ಲಿ ಜಿಎಚ್ಐ ಶ್ರೇಯಾಂಕಗಳ ಬಿಡುಗಡೆಯು ಆಹಾರದ ಮೂಲಭೂತ ಹಕ್ಕಿಗಾಗಿ ಹಲವರ ಹೋರಾಟದ ಬಗ್ಗೆ ಸಾರ್ವಜನಿಕ ಗಮನವನ್ನು ಸೆಳೆಯಲು ಉತ್ತಮ ಅವಕಾಶವನ್ನು ಒದಗಿಸಿದೆ. ಜಿಎಚ್ಐ ಶ್ರೇಯಾಂಕವು ಸಮಾನ ಆದ್ಯತೆಗಳ ನಾಲ್ಕು ಸೂಚಕಗಳಲ್ಲಿ ದೇಶದ ಅಂಕಗಳ ಸರಾಸರಿಯಾಗಿದೆ. ಕ್ಯಾಲರಿ ಸೇವನೆಯಲ್ಲಿ ಕೊರತೆ,ಕೃಶತೆ,ಕುಬ್ಜತೆ ಮತ್ತು ಮಕ್ಕಳಲ್ಲಿ ಸಾವುಗಳ ಪ್ರಮಾಣ ಇವು ಈ ನಾಲ್ಕು ಸೂಚಕಗಳಾಗಿವೆ.

ಹಸಿವನ್ನು ಅಳೆಯುವುದು ಜುಜುಬಿ ಕೆಲಸವಲ್ಲ. ಕೆಲವು ಭಾರತೀಯ ಸಮೀಕ್ಷೆಗಳಲ್ಲಿ ಜನರು ಹಸಿದ ಹೊಟ್ಟೆಯಲ್ಲಿ ಮಲಗುವುದು ಅಥವಾ ಊಟವನ್ನು ತಪ್ಪಿಸಿಕೊಳ್ಳುವುದು ಅನಿವಾರ್ಯವಾಗಿದೆಯೇ, ಅವರು ಕಡಿಮೆ ಆಹಾರವನ್ನು ಸೇವಿಸುತ್ತಿದ್ದಾರೆಯೇ ಇತ್ಯಾದಿ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹಸಿವಿನ ಪರಿಕಲ್ಪನೆಯನ್ನು ಪೌಷ್ಟಿಕಾಂಶ ಫಲಿತಾಂಶಗಳಿಗೆ ವಿಸ್ತರಿಸಲು ಜಿಎಚ್ಐ ಪ್ರಯತ್ನ ಸ್ವಾಗತಾರ್ಹವಾದರೂ ಅದರಲ್ಲಿಯ ಕೆಲವು ಅಂಶಗಳು ಚರ್ಚಾರ್ಹವಾಗಿವೆ.

ಜಿಎಚ್ಐನ ಇತರ ಮಿತಿಗಳನ್ನೂ ಪ್ರಮುಖವಾಗಿ ಬಿಂಬಿಸಲಾಗುತ್ತಿದೆ. ಜನಸಂಖ್ಯೆಯ ಎಷ್ಟು ಭಾಗ ಸಾಕಷ್ಟು ಕ್ಯಾಲೊರಿಗಳನ್ನು ಸೇವಿಸುತ್ತಿಲ್ಲ ಎನ್ನುವುದನ್ನು ನಿರ್ಧರಿಸಲು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (ಎಫ್ಎಒ)ಯ ದತ್ತಾಂಶಗಳ ಬಳಕೆಯು ಅತಿಯಾದ,ಅವಾಸ್ತವಿಕವಾದ ಗ್ರಹಿಕೆಗಳನ್ನು ಒಳಗೊಂಡಿದೆ. ಈ ವರ್ಷ ಒಂದು ರೀತಿಯಲ್ಲಿ ವಿಶೇಷವಾಗಿ ಜಿಚ್ಐ ಸಿದ್ಧಪಡಿಸುವ ವಿಧಾನದ ಮೇಲೆ ಹೆಚ್ಚಿನ ಗಮನ ಬಿದ್ದಿದೆ. ಸರಕಾರವು ಹೇಳಿಕೆಯೊಂದರಲ್ಲಿ ಇದನ್ನು ಪ್ರಶ್ನಿಸಿದೆ.

ಜಿಎಚ್ಐ ವರದಿಯು ವಾಸ್ತವತೆಗಳು ಮತ್ತು ಸತ್ಯಾಂಶಗಳಿಂದ ದೂರವಿದೆ ಮತ್ತು ಅಸಂಗತತೆಗಳಿಂದ ಕೂಡಿದೆ ಎಂದು ಸರಕಾರವು ಪ್ರತಿಪಾದಿಸಿದೆ. ವೈಜ್ಞಾನಿಕವಾಗಿ ಅಪೌಷ್ಟಿಕತೆಯನ್ನು ಅಳೆಯಲು ತೂಕ ಮತ್ತು ಎತ್ತರದ ಮಾಪನ ಅಗತ್ಯವಾಗಿದೆ,ಆದರೆ ಜಿಎಚ್ಐ ಸಿದ್ಧಪಡಿಸಲು ಬಳಸಲಾದ ವಿಧಾನವು ದೂರವಾಣಿ ಕರೆಗಳ ಅಂದಾಜುಗಳ ಜನಾಭಿಪ್ರಾಯ ಸಂಗ್ರಹವನ್ನು ಆಧರಿಸಿದೆ ಎಂದು ಸರಕಾರವು ಹೇಳಿದೆ.

ಹೇಳಿಕೆಯ ಮೊದಲ ಅರ್ಧವು ಸಿಂಧುವಾಗಿದೆ. ದೀರ್ಘಕಾಲಿಕ ಮತ್ತು ತೀವ್ರವಾದ ಹಸಿವು ತೂಕ ಮತ್ತು ಎತ್ತರವನ್ನು ಅವಲಂಬಿಸಿರುವ ಕೃಶತೆ ಮತ್ತು ಕುಬ್ಜತೆಯಲ್ಲಿ ಅಭಿವ್ಯಕ್ತಗೊಳ್ಳುತ್ತದೆ. ಆದರೆ ದ್ವಿತೀಯ ಅರ್ಧವು ಸಿಂಧುವಲ್ಲ. ಎರಡು ಸೂಚಕಗಳಾದ ಮಕ್ಕಳ ಕೃಶತೆ ಮತ್ತು ಕುಬ್ಜತೆಯಲ್ಲಿ 2020ಕ್ಕೆ ಹೋಲಿಸಿದರೆ 2021ರಲ್ಲಿ ಬದಲಾವಣೆಯಾಗಿಲ್ಲ ಎನ್ನುವ ಸರಕಾರದ ಹೇಳಿಕೆಯಲ್ಲಿನ ಕೊನೆಯ ವಾಕ್ಯದಿಂದ ಇದು ಸ್ಪಷ್ಟವಾಗಿದೆ.

ಭಾರತದಲ್ಲಿ ಹಸಿವು,ಪೌಷ್ಟಿಕತೆ ಮತ್ತು ಆರೋಗ್ಯಗಳನ್ನು ದೀರ್ಘಕಾಲದಿಂದಲೂ ಕಡೆಗಣಿಸಲಾಗಿದೆ ಎನ್ನುವುದನ್ನು ಪರಿಗಣಿಸಿದರೆ ಭಾರತಕ್ಕೆ ಕೆಳಗಿನ ಜಿಎಚ್ಐ ಶ್ರೇಯಾಂಕ ಲಭಿಸಿರುವುದು ಅಚ್ಚರಿಯೇನಲ್ಲ. ಅದು ಸಾಂಕ್ರಾಮಿಕದ ಅವಧಿ ಸೇರಿದಂತೆ 2014ರಿಂದ ಕಡಿತಗಳಿಗೆ ಒಳಗಾಗಿರುವ,ಮಕ್ಕಳ ಪೌಷ್ಟಿಕತೆ ಕಾರ್ಯಕ್ರಮಗಳಿಗೆ ಕಡಿಮೆ ಬಜೆಟ್ಗಳನ್ನು ಪ್ರತಿಬಿಂಬಿಸುತ್ತದೆ.

ಕೋವಿಡ್ ಬಿಕ್ಕಟ್ಟು ನಿರ್ಣಾಯಕ ಸಾಮಾಜಿಕ ಬೆಂಬಲವನ್ನು ವ್ಯತ್ಯಯಗೊಳಿಸುವ ಮೂಲಕ ಪೌಷ್ಟಿಕಾಂಶ ಫಲಿತಾಂಶಗಳನ್ನು ಹದಗೆಡಿಸಿದೆ. ಮೊದಲ ಲಾಕ್ಡೌನ್ ಹೇರಿದಾಗಿನಿಂದ ಅಂಗನವಾಡಿಗಳ ಮುಚ್ಚುಗಡೆಯಿಂದ ಇದು ಎದ್ದು ಕಾಣುತ್ತಿದೆ. ಈ ಮುಚ್ಚುಗಡೆಯು ಮಹತ್ವದ ಸಮಯ-ಸೂಕ್ಷ್ಮ ಆರೋಗ್ಯ ಮತ್ತು ಪೌಷ್ಟಿಕತೆ ಹಸ್ತಕ್ಷೇಪಗಳನ್ನು ಸ್ಥಗಿತಗೊಳಿಸಿತ್ತು. ಹೆಚ್ಚಿನ ರಾಜ್ಯಗಳು ಆರು ವರ್ಷದೊಳಗಿನ ಅಂಗನವಾಡಿ ಮಕ್ಕಳಿಗೆ ಮೊಟ್ಟೆಗಳನ್ನು ಒದಗಿಸುತ್ತವೆ. 

ವಿಫುಲ ಪೋಷಕಾಂಶಗಳನ್ನು ಒಳಗೊಂಡಿರುವ ಮೊಟ್ಟೆ ಇಂದಿಗೂ ಹೆಚ್ಚಿನ ಭಾರತೀಯ ಮಕ್ಕಳ ಪಾಲಿಗೆ ಐಷಾರಾಮಿ ವಸ್ತುವಾಗಿದೆ. ಅಂಗನವಾಡಿಗಳ ಮುಚ್ಚುವಿಕೆಯು ಪ್ರತಿರಕ್ಷಣೆ, ಪ್ರಸರ್ವಪೂರ್ವ ಕಾಳಜಿ ಮತ್ತು ಆರೋಗ್ಯ ರಕ್ಷಣೆ ಸೌಲಭ್ಯಗಳಿಂದಲೂ ವಂಚಿತಗೊಳಿಸಿತ್ತು.

ಪೌಷ್ಟಿಕಾಂಶ ಫಲಿತಾಂಶಗಳನ್ನು ಮುಖ್ಯವಾಗಿ ತಾಯಿಯ ಗರ್ಭದಲ್ಲಿದ್ದ ಅವಧಿ ಸೇರಿದಂತೆ ಮಗುವಿನ ಜೀವನದ ಮೊದಲ 1,000 ದಿನಗಳಿಂದ ನಿರ್ಧರಿಸಲಾಗುತ್ತದೆ. ಹೀಗಾಗಿ ಗರ್ಭವತಿಯರು, ಹಾಲುಣಿಸುತ್ತಿರುವ ತಾಯಂದಿರು ಮತ್ತು ಆರು ವರ್ಷದೊಳಗಿನ ಮಕ್ಕಳನ್ನು ತಲುಪುವುದು ನಿರ್ಣಾಯಕವಾಗುತ್ತದೆ.
 
ಅದೃಷ್ಟವಶಾತ್ ಭಾರತವು ಅಂಗನವಾಡಿಗಳು/ಸಮಗ್ರ ಶಿಶು ಅಭಿವೃದ್ಧಿ ಸೇವೆಗಳು ಮತ್ತು ಮಧ್ಯಾಹ್ನದ ಬಿಸಿಯೂಟದ ಮೂಲಕ ಸುಮಾರು 20 ಕೋಟಿ ಮಕ್ಕಳಿಗೆ ಪೋಷಕಾಂಶಗಳನ್ನು ಒದಗಿಸುವ ವ್ಯವಸ್ಥೆಯನ್ನು ಹೊಂದಿದೆ, ಅಲ್ಲದೆ ಸಾರ್ವಜನಿಕ ವಿತರಣೆ ವ್ಯವಸ್ಥೆ (ಪಿಡಿಎಸ್)ಯ ಮೂಲಕ ಸುಮಾರು 80 ಕೋಟಿ ಜನರಿಗೆ ಪಡಿತರ ಲಭಿಸುತ್ತಿದೆ. ಸಾಂಕ್ರಾಮಿಕದ ಸಂದರ್ಭದಲ್ಲಿ ಅವುಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳುವ ಬದಲು ಶಾಲೆಗಳು ಮತ್ತು ಅಂಗನವಾಡಿಗಳನ್ನು ಮುಚ್ಚ ಲಾಗಿತ್ತು.

ಪಿಡಿಎಸ್ ನ ವಾಪ್ತಿಯನ್ನು ಹೆಚ್ಚಿಸುವುದು,ಶಾಲೆಗಳು ಮತ್ತು ಅಂಗನವಾಡಿಗಳಲ್ಲಿ ಆಹಾರದ ಗುಣಮಟ್ಟವನ್ನು ಹೆಚ್ಚಿಸುವುದು,ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯ ಮೂಲಕ ಮಾತೃತ್ವ ಹಕ್ಕುಗಳನ್ನು ಸಾರ್ವತ್ರೀಕರಿಸುವುದು ಮತ್ತು ಸರಳಗೊಳಿಸುವುದು ಇತ್ಯಾದಿ ನೇರ ಆಯ್ಕೆಗಳಿದ್ದರೂ ಸರಕಾರವು ಇನ್ನೂ ಯಾವುದಕ್ಕೆ ಕಾಣುತ್ತಿದೆ ಎನ್ನುವುದು ಸ್ಪಷ್ಟವಾಗಿಲ್ಲ.

ವರದಿ ಕೃಪೆ: thewire.in

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News