ಸೋಲಿಗೆ ಒಬ್ಬನೇ ಹೊಣೆಯೇ?

Update: 2021-10-27 17:59 GMT

ಮಾನ್ಯರೇ,

ಇತ್ತೀಚೆಗೆ ನಡೆದ ಟಿ-20 ವಿಶ್ವಕಪ್ ಟೂರ್ನಿಯ ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯದಲ್ಲಿ ಟೀಂ ಇಂಡಿಯಾ ಸೋತ ಕಾರಣಕ್ಕಾಗಿ ಹಲವಾರು ವರ್ಷಗಳಿಂದ ತಂಡದ ಪ್ರಮುಖ ಭರವಸೆಯ ಬೌಲರ್ ಆಗಿರುವ ಮುಹಮ್ಮದ್ ಶಮಿ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಅವರ ಇನ್‌ಸ್ಟಾಗ್ರಾಂ ಖಾತೆಗೆ ನಿರಂತರವಾಗಿ ಸಭ್ಯವಲ್ಲದ ಟೀಕೆ ಮಾಡುತ್ತಿರುವುದು ಖಂಡನೀಯ...! ಸಮಯಕ್ಕೆ ತಕ್ಕಂತೆ ಸರಿಯಾಗಿ ನಿರ್ವಹಣೆ ತೋರದ ತಂಡದ ಹನ್ನೊಂದು ಆಟಗಾರರೂ ಸೋಲಿಗೆ ಜವಾಬ್ದಾರಿ ಆಗಿರುತ್ತಾರೆ ಹೊರತೂ ತಾವು ಮಾಡಿದ ಓವರ್‌ಗಳಲ್ಲಿ ಒಂದಿಷ್ಟು ರನ್ ನೀಡಿದ್ದಕ್ಕೆ ಧರ್ಮದ ನೆಪವೊಡ್ಡಿ ಮುಹಮ್ಮದ್ ಶಮಿ ಅವರನ್ನು ವೈಯಕ್ತಿಕವಾಗಿ ನಿಂದಿಸಿ ಟೀಕೆ ಮಾಡುತ್ತಿರುವುದು ಯಾರೂ ಒಪ್ಪುವಂತಹದ್ದಲ್ಲ..!

ಜಹೀರ್ ಖಾನ್ ನಂತರ ಟೀಂ ಇಂಡಿಯಾದ ಅಗ್ರ ಪಂಕ್ತಿಯ ಬೌಲರ್ ಆಗಿ 2013ರಿಂದ ಮೂರೂ ತರಹದ ಮಾದರಿಯ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ತಂಡದ ಪ್ರಮುಖ ಆಧಾರ ಸ್ಥಂಭವಾಗಿ ಸ್ಥಿರ ಪ್ರದರ್ಶನ ನೀಡುತ್ತಾ ಬಂದಿರುವ ಇವರನ್ನು ಟೀಕಿಸುತ್ತಿರುವುದು ನ್ಯಾಯವಲ್ಲ. 2015ರ ವಿಶ್ವಕಪ್ ಟೂರ್ನಿಯಲ್ಲಿ ಇದೇ ಪಾಕಿಸ್ತಾನ ತಂಡದ ವಿರುದ್ಧ ಅಂದಿನ ಪಂದ್ಯ ಗೆಲ್ಲಲು ಶಮಿ ಕಾರಣರಾಗಿದ್ದರು ಅನ್ನುವುದನ್ನು ಕೊಂಕು ಹುಡುಕುವ ಮನಸ್ಥಿತಿಯವರು ಮರೆಯಬಾರದು..! ಇಲ್ಲಿ, ಪಾಕ್ ವಿರುದ್ಧ ಭಾರತ ಕೇವಲ ಪಂದ್ಯ ಮಾತ್ರ ಸೋತಿಲ್ಲ. ಕೆಲವು ಉಗ್ರ ಪಂಥೀಯ ಕೋಮು ಸಾಮರಸ್ಯ ಹಾಳು ಮಾಡುವ ಜನರಿಂದ ಜಾಗತಿಕ ಮಟ್ಟದಲ್ಲಿ ತಲೆತಗ್ಗಿಸುವಂತಾಗಿದೆ. ಕ್ರೀಡೆಯಲ್ಲಿ ಗೆಲುವು ಸೋಲು ಸರ್ವೇ ಸಾಮಾನ್ಯ ಆದರೆ ಅದನ್ನು ಕ್ರೀಡಾ ಮನೋಭಾವದಿಂದ ನೋಡಬೇಕು ವಿನಃ ಧರ್ಮ, ಜಾತಿ, ಹುಡುಕುವುದು ಸ್ವಸ್ಥ ಸಮಾಜವನ್ನು ಹದಗೆಡಿಸುತ್ತದೆ. ಮಹಿಳೆಯ ನಡತೆ, ದಲಿತರ ಅರ್ಹತೆ, ಮುಸ್ಲಿಮರ ದೇಶಪ್ರೇಮ.. ಯಾವಾಗಲೂ ಈ ದೇಶದಲ್ಲಿ ಚರ್ಚಿತ ವಿಷಯ ಎಂಬುದು ಪದೇ ಪದೇ ಇಂತಹ ಘಟನೆಗಳಿಂದ ನಿರೂಪಿತವಾಗುತ್ತಿರುವುದು ಖೇದಕರ ಸಂಗತಿ. ಇವಕ್ಕೆಲ್ಲಾ ಎಂದೂ ಕೊನೆಯಿಲ್ಲವೇ? ಸ್ವಸ್ಥ ಸಮಾಜದ ಸ್ವಾಸ್ಥ್ಯ ಹದಗೆಡಿಸುವ ಕಿಡಿಗೇಡಿಗಳನ್ನು ಕಾನೂನಿನ ಚೌಕಟ್ಟಿನಲ್ಲಿ ಶಿಕ್ಷಿಸಬೇಕಿದೆ.

Writer - -ಅನಿಲ್ ಕುಮಾರ್, ನಂಜನಗೂಡು

contributor

Editor - -ಅನಿಲ್ ಕುಮಾರ್, ನಂಜನಗೂಡು

contributor

Similar News