"ಸೈಲ್ ನಂತೆ ನನ್ನಿಂದಲೂ ಎನ್ ಸಿಬಿ ಖಾಲಿ ಹಾಳೆಯ ಮೇಲೆ ಸಹಿಹಾಕಿಸಿಕೊಂಡಿತ್ತು"

Update: 2021-10-27 18:03 GMT

ಮುಂಬೈ, ಅ. 27: ಮಾದಕ ದ್ರವ್ಯ ನಿಯಂತ್ರಣ ಬ್ಯುರೊ (ಎನ್ ಸಿಬಿ) ಖಾಲಿ ಹಾಳೆಗೆ ತನ್ನ ಸಹಿ ಹಾಕಿಸಿಕೊಂಡಿದೆ ಎಂದು ಪ್ರಯಾಣಿಕ ಹಡಗಿನಲ್ಲಿ ಮಾದಕ ದ್ರವ್ಯ ಪತ್ತೆಯಾದ ಪ್ರಕರಣದ ಸಾಕ್ಷಿ ಪ್ರಭಾಕರ್ ಸೈಲ್ ಪ್ರತಿಪಾದಿಸುವ ಮೂಲಕ ವಿವಾದ ಉಂಟಾದ ಒಂದು ದಿನದ ಬಳಿಕ ಇನ್ನೊಂದು ಮಾದಕ ದ್ರವ್ಯ ಪತ್ತೆ ಪ್ರಕರಣದ ಸಾಕ್ಷಿಯೊಬ್ಬರು, ತನಗೆ ಕೂಡ ಈ ವರ್ಷದ ಆರಂಭದಲ್ಲಿ ಎನ್ ಸಿಬಿಯಿಂದ ಇದೇ ರೀತಿಯ ಅನುಭವ ಉಂಟಾಯಿತು ಎಂದಿದ್ದಾರೆ.

ಈ ವರ್ಷ ಆಗಸ್ಟ್ ನಲ್ಲಿ ಎನ್ ಸಿಬಿ ತನಿಖೆ ಆರಂಭಿಸಿರುವ ಮಾದಕ ದ್ರವ್ಯ ಪತ್ತೆ ಪ್ರಕರಣದ ಸಾಕ್ಷಿ ನವಿ ಮುಂಬೈಯ ಶೇಖರ್ ಕಾಂಬ್ಳೆ, ಎನ್ ಸಿಬಿ 10-12 ಖಾಲಿ ಕಾಗದದ ಹಾಳೆ ಮೇಲೆ ತನ್ನ ಸಹಿ ತೆಗೆದುಕೊಂಡಿತು. ಅನಂತರ ತನಗೆ ಮಾಹಿತಿ ನೀಡದೆ ಪಂಚನಾಮೆಯ ವಿಷಯಗಳನ್ನು ಅವರಿಗೆ ಬೇಕಾದಂತೆ ಬರೆದು ತುಂಬಿಸಿತ್ತು. ಪ್ರಭಾಕರ್ ಸೈಲ್ ಅವರು ಮಾಧ್ಯಮಕ್ಕೆ ಇತ್ತೀಚೆಗೆ ನೀಡಿದ ಸಂದರ್ಶನ ತನಗೆ ಮಾತನಾಡಲು ಹಾಗೂ ಸತ್ಯ ಬಹಿರಂಗ ಪಡಿಸಲು ಸ್ಫೂರ್ತಿ ನೀಡಿತು ಎಂದರು.

ಕಾಂಬ್ಳೆ ಅವರ ಆರೋಪ ಕುರಿತು ಪ್ರತಿಕ್ರಿಯಿಸಲು ಎನ್ಸಿಬಿಯ ಮುಂಬೈ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಅವರನ್ನು ಸಂಪರ್ಕಿಸಿದಾಗ ಅವರು, ‘‘ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ. ನನ್ನ ಯಾವುದೇ ಅಭಿಪ್ರಾಯವನ್ನು ನ್ಯಾಯಾಲಯದಲ್ಲಿ ಹೇಳುತ್ತೇನೆ’’ ಎಂದಿದ್ದಾರೆ. ಪ್ರಾದೇಶಿಕ ನ್ಯೂಸ್ ಚಾನೆಲ್ ನ ಸಂದರ್ಶನವೊಂದರಲ್ಲಿ ಕೆಮರಾ ಮುಂದೆ ಮಾತನಾಡುತ್ತಾ ಕಾಂಬ್ಳೆ ಈ ಆರೋಪ ಮಾಡಿದ್ದಾರೆ. ನ್ಯೂಸ್ ಚಾನೆಲ್ ನ ಸಂದರ್ಶನದ ಬಳಿಕ ಇಂಡಿಯನ್ ಎಕ್ಸ್ಪ್ರೆಸ್ ನೊಂದಿಗೆ ಫೋನ್ ನಲ್ಲಿ ಮಾತನಾಡಿದ್ದಾರೆ. ಅಲ್ಲದೆ, ಎನ್ಸಿಬಿ ವಿರುದ್ಧ ತಾನು ಮಾಡಿದ ಆರೋಪ ಸತ್ಯ ಎಂದು ದೃಢಪಡಿಸಿದ್ದಾರೆ.

ಈ ವರ್ಷದ ಆರಂಭದಲ್ಲಿ ಎನ್ ಸಿಬಿ ‘ಥಂಡರ್ ಬೋಲ್ಟ್’ ಕಾರ್ಯಾಚರಣೆ ನಡೆಸಿತ್ತು. ಹಲವು ಸ್ಥಳಗಳ ಮೇಲೆ ದಾಳಿ ನಡೆಸಿತ್ತು ಹಾಗೂ ಮಾದಕ ದ್ರವ್ಯ ಸಾಗಾಟಗಾರರನ್ನು ಬಂಧಿಸಿತ್ತು. ನವಿ ಮುಂಬೈಯ ಖರ್ಘರ್ ನಲ್ಲಿ ಆಗಸ್ಟ್ ನಲ್ಲಿ ನಡೆಸಿದ ಕಾರ್ಯಾಚರಣೆ ಸಂದರ್ಭ ‘ನೈಜೀರಿಯನ್ ಕಮ್ಯೂನಿಟಿ ಕಿಚನ್’ನಲ್ಲಿ ಕಿಂಗ್ಸ್ಲೆ ಉಕ್ವೇಝಾ ಎಂದು ಗುರುತಿಸಲಾದ ನೈಜೀರಿಯಾದ ಪ್ರಜೆಯೋರ್ವನನ್ನು ಬಂಧಿಸಿತ್ತು. ಎನ್ ಸಿಬಿ ತಂಡ ದಾಳಿ ನಡೆಸಿದಾಗ ನೈಜೀರಿಯಾದ 50 ಮಂದಿ ಪ್ರಜೆಗಳೊಂದಿಗೆ ಉಕ್ವೇಝಾ ಅಲ್ಲಿದ್ದ.

ಉಕ್ವೇಝಾನಿಗೆ ಅಂತಾರಾಷ್ಟ್ರೀಯ ನಂಟು ಇದೆ. ಈತ ನವಿ ಮುಂಬೈಗೆ ಪ್ರಮುಖ ಮಾದಕ ದ್ರವ್ಯ ಸಾಗಾಟಗಾರ ಎಂದು ಎನ್ಸಿ ಬಿ ಹೇಳಿತ್ತು. ಈ ಘಟನೆಯಲ್ಲಿ ಇಬ್ಬರು ಎನ್ಸಿಬಿ ಅಧಿಕಾರಿಗಳು ಗಾಯಗೊಂಡಿದ್ದರು. ಈ ಪ್ರಕರಣವನ್ನು ಇಂಡಿಯನ್ ಎಕ್ಸ್ ಪ್ರೆಸ್ ಆಗ ವರದಿ ಮಾಡಿತ್ತು. ತಾನು ಈ ಪ್ರಕರಣದ ಸಾಕ್ಷಿ ಎಂದು ಕಾಂಬ್ಳೆ ಹೇಳಿದ್ದಾರೆ. ಮರಾಠಿ ಸುದ್ದಿ ವಾಹಿನಿಯೊಂದಿಗೆ ಮಾತನಾಡಿ ಕಾಂಬ್ಳೆ, ‘‘ನಾನು ಶೇಖರ್ ಕಾಂಬ್ಳೆ, ನವಿ ಮುಂಬೈಯ ನಿವಾಸಿ. ನಾನು ಯಾವುದೇ ಆರೋಪ ಮಾಡುತ್ತಿಲ್ಲ. ಆದರೆ, ಈ ಪ್ರಕರಣದಲ್ಲಿ ನಾನು (ಎನ್ಸಿಬಿಯಿಂದ) ಮೋಸಕ್ಕೆ ಒಳಗಾಗಿರುವುದನ್ನು ಹೇಳಲು ಬಯಸುತ್ತೇನೆ. ಖರ್ಘರ್ ಪ್ರಕರಣ ಸಂಖ್ಯೆ 80/21ರಲ್ಲಿ ನೈಜೀರಿಯ ಪ್ರಜೆಯನ್ನು ಬಂಧಿಸಲಾಯಿತು. ಆ ನೈಜೀರಿಯ ಪ್ರಜೆ ಮಾದಕ ದ್ರವ್ಯ ಸಾಗಾಟಗಾರನಾಗಿರಲಿಲ್ಲ. ಅವರು ಅಲ್ಲಿಗೆ ತೆರಳಿದಾಗ ನೈಝೀರಿಯಾದ ಮಾದಕ ದ್ರವ್ಯ ಸಾಗಾಟಗಾರ ಅವರನ್ನು ದೂಡಿಕೊಂಡು ಪರಾರಿಯಾಗಿದ್ದ’’ ಎಂದು ಅವರು ಹೇಳಿದ್ದಾರೆ.

ಮುಂದುವರೆದು ಅವರು, ‘‘ಅನಂತರ ನಾವು ನೈಜೀರಿಯ ಕಿಚನ್ ಎಂದು ಕರೆಯಲಾಗುವ ಇನ್ನೊಂದು ಸ್ಥಳಕ್ಕೆ ಹೋದೆವು. ಅಲ್ಲಿ 40ರಿಂದ 50 ನೈಜೀರಿಯ ಪ್ರಜೆಗಳು ಇದ್ದರು. ಎನ್ಸಿಬಿ ಅಧಿಕಾರಿಗಳು ಕಟ್ಟಡದ ಮೇಲೆ ದಾಳಿ ನಡೆಸಿದರು. ಎಲ್ಲ ನೈಜೀರಿಯ ಪ್ರಜೆಗಳು ಓಡಿದರು. ಅವರು ಓರ್ವ ಬಾಲಕ ಸೇರಿದಂತೆ ಇಬ್ಬರನ್ನು ಬಂಧಿಸುವಲ್ಲಿ ಸಫಲರಾದರು. ಅವರನ್ನು ಕಚೇರಿಗೆ ಕರೆದುಕೊಂಡು ಹೋದರು. ಮರುದಿನ ಬಾಲಕನ್ನು ಬಿಟ್ಟರು. ಇನ್ನೊಬ್ಬ ವ್ಯಕ್ತಿಯನ್ನು ತಮ್ಮ ವಶದಲ್ಲಿ ಇರಿಸಿಕೊಂಡರು. ಅವರಲ್ಲಿ ಯಾವುದೇ ಮಾದಕ ದ್ರವ್ಯ ಇರಲಿಲ್ಲ. ಆದರೆ, ಅವರಿಂದ 60 ಗ್ರಾಂ ಮಾದಕ ದ್ರವ್ಯ ವಶಪಡಿಸಿರುವುದಾಗಿ ತೋರಿಸಿದರು. ಮೂರು ದಿನಗಳ ಬಳಿಕ 10ರಿಂದ 12 ಖಾಲಿ ಹಾಳೆಗಳಿಗೆ ನಾನು ಹಾಗೂ ನನ್ನ ಗೆಳೆಯನಿಂದ ಸಹಿ ಹಾಕಿಸಿಕೊಂಡರು. ನಾನು ಮತ್ತು ನನ್ನ ಗೆಳೆಯ ಆ ಖಾಲಿ ಹಾಳಿಗೆ ಸಹಿ ಹಾಕಿದೆವು. ಅವರು ಅನಂತರ ಅದಕ್ಕೆ ಬರೆದು ತುಂಬಿಸಿದರು’’ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News