ತ್ರಿಪುರಾದಲ್ಲಿ ಮುಂದುವರಿದ ಮುಸ್ಲಿಮರ ವಿರುದ್ಧದ ಹಿಂಸಾಚಾರ: ಹಲವು ಅಂಗಡಿ, ಮಸೀದಿಗಳ ಮೇಲೆ ದಾಳಿ

Update: 2021-10-28 10:56 GMT

ಅಗರ್ತಲಾ: ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲಿನ ದಾಳಿಯನ್ನು ಖಂಡಿಸಿ ಮಂಗಳವಾರ ವಿಶ್ವ ಹಿಂದು ಪರಿಷದ್ ಉತ್ತರ ತ್ರಿಪುರಾದಲ್ಲಿ ನಡೆಸಿದ ರ್ಯಾಲಿಯೊಂದರ ಸಂದರ್ಭ ಪಣಿಸಾಗರ್ ಉಪವಿಭಾಗದ ಚಮ್ತಿಲ ಮತ್ತು ರೋವ ಬಜಾರ್ ಪ್ರದೇಶದಲ್ಲಿ ಒಂದು ಮಸೀದಿ, ಕೆಲವು ಮನೆಗಳು ಹಾಗೂ ಅಂಗಡಿಗಳ ಮೇಲೆ ದಾಳಿ ನಡೆಸಿ ದಾಂಧಲೆಗೈಯ್ಯಲಾಗಿದೆ ಎಂದು thewire.in ವರದಿ ಮಾಡಿದೆ.

ಘಟನೆಯ ನಂತರ ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಅನ್ನು ಹೆಚ್ಚಿಸಲಾಗಿದ್ದು ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ.

ಹಿಂಸಾತ್ಮಕ ಘಟನೆಗಳ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು "ತ್ರಿಪುರಾ ಮೆ ಮುಲ್ಲಾಗಿರಿ ನಹೀ ಚಲೇಗಾ, ನಹೀ ಚಲೇಗಾ" "ಓಹ್ ಮೊಹಮ್ಮದ್ ತೇರಾ ಬಾಪ್, ಹರೇ ರಾಮ ಹರೇ ಕೃಷ್ಣ" ಮುಂತಾದ ಪ್ರಚೋದನಕಾರಿ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನಾಕಾರರು ಸಾಗುತ್ತಿರುವುದು ಅದರಲ್ಲಿ ಕಾಣಿಸುತ್ತದೆ.

ಆದರೆ ಈ ವೀಡಿಯೋ ಪಣಿಸಾಗರ್ ಘಟನೆಯದ್ದಲ್ಲ, ಇದು ಬೇರೆ ಯಾವುದೋ ಪ್ರದೇಶದಲ್ಲಿ ನಡೆದ ಘಟನೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಪ್ರಚೋದನಾತ್ಮಕ ಘೋಷಣೆಗಳನ್ನು ಕೂಗಿದ್ದಾರೆಂದು ಆರೋಪಿಸಿ ಅಲ್ಪಸಂಖ್ಯಾತ ಸಮುದಾಯದ ಕೆಲ ಮಂದಿ  ಕೆಲ ಅಪರಿಚಿತ ವಿಹಿಂಪ ಕಾರ್ಯಕರ್ತರ ವಿರುದ್ಧ ದೂರು ನೀಡಿದ್ದಾರೆ," ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆಂದು ದಿ ವೈರ್ ವರದಿ ಮಾಡಿದೆ.

ಸದ್ಯ ಘಟನೆ ನಡೆದ ಪ್ರದೇಶದಲ್ಲಿ ನಿಷೇಧಾಜ್ಞೆಯನ್ನು ಹೇರಲಾಗಿದೆ. ಆದರೆ ಇಲ್ಲಿಯ ತನಕ ಯಾರನ್ನೂ ಬಂಧಿಸಲಾಗಿಲ್ಲ.

ಆದರೆ ಘಟನೆ ಹಿಂದೆ ರಾಜಕೀಯ ಸಂಚಿದೆ. ವಿಹಿಂಪ ಅನುಮತಿ ಪಡೆದೇ ರ್ಯಾಲಿ ನಡೆಸಿದೆ, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಬಿಜೆಪಿ ವಕ್ತಾರ ನಬೇಂದು ಭಟ್ಟಾಚಾರ್ಯ ಹೇಳಿದ್ದಾರೆ.

ತ್ರಿಪುರಾ ಉತ್ತರ ಜಿಲ್ಲೆ ವಿಹಿಂಪ ಅಧ್ಯಕ್ಷ ನಾನಿ ಗೋಪಾಲ್ ದೇಬನಾಥ್ ಕೂಡ ಪ್ರತಿಕ್ರಿಯಿಸಿ, ಮಸೀದಿ, ಮನೆಗಳು ಹಾಗೂ ಅಂಗಡಿಗಳಿಗೆ ಅಲ್ಪಸಂಖ್ಯಾತ ಸಮುದಾಯದ ಕೆಲ ಸದಸ್ಯರೇ ದಾಳಿ ನಡೆಸಿದ್ದರು ಎಂದು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News