×
Ad

ಏರ್ ಇಂಡಿಯಾದ ಬಾಕಿಗಳನ್ನು ತಕ್ಷಣ ಪಾವತಿಸಲು ಸಚಿವಾಲಯಗಳು, ಇಲಾಖೆಗಳಿಗೆ ಕೇಂದ್ರದ ತಾಕೀತು

Update: 2021-10-28 17:25 IST
Photo: Twitter

ಹೊಸದಿಲ್ಲಿ,ಅ.28: ಏರ್ ಇಂಡಿಯಾಕ್ಕೆ ಬಾಕಿಗಳನ್ನು ತಕ್ಷಣ ಪಾವತಿಸುವಂತೆ ಕೇಂದ್ರ ವಿತ್ತ ಸಚಿವಾಲಯವು ಎಲ್ಲ ಕೇಂದ್ರ ಸಚಿವಾಲಯಗಳು ಮತ್ತು ಸರಕಾರಿ ಇಲಾಖೆಗಳಿಗೆ ನಿರ್ದೇಶ ನೀಡಿದೆ.ಏರ್ ಇಂಡಿಯಾ ಸಾಲ ಸೌಲಭ್ಯವನ್ನು ನಿಲ್ಲಿಸಿರುವುದರಿಂದ ಹಣ ಕೊಟ್ಟು ಟಿಕೆಟ್‌ಗಳನ್ನು ಖರೀದಿಸುವಂತೆಯೂ ವೆಚ್ಚ ಇಲಾಖೆಯು ಬುಧವಾರ ಹೊರಡಿಸಿದ ಆದೇಶದಲ್ಲಿ ಸಚಿವಾಲಯಗಳು ಮತ್ತು ಇಲಾಖೆಗಳಿಗೆ ಸೂಚಿಸಿದೆ.

ಸಾಲದ ಸುಳಿಯಲ್ಲಿರುವ ಏರ್ ಇಂಡಿಯಾವನ್ನು ಟಾಟಾ ಸನ್ಸ್ ಇತ್ತೀಚಿಗೆ ನಡೆದ ಬಿಡ್‌ನಲ್ಲಿ ಖರೀದಿಸಿದೆ.

ಎಲ್ಲ ಸರಕಾರಿ ಅಧಿಕಾರಿಗಳು ತಮ್ಮ ಅಧಿಕೃತ ಪ್ರವಾಸಗಳನ್ನು ಏರ್ ಇಂಡಿಯಾ ವಿಮಾನಗಳಲ್ಲಿ ಮಾಡುವುದನ್ನು ಕಡ್ಡಾಯಗೊಳಿಸಿ ವೆಚ್ಚ ಇಲಾಖೆಯು 2009, ಜುಲೈನಲ್ಲಿ ಆದೇಶವನ್ನು ಹೊರಡಿಸಿತ್ತು. ಎಲ್‌ಟಿಸಿ ಪ್ರಯಾಣಗಳು ಸೇರಿದಂತೆ ಎಲ್ಲ ದೇಶಿಯ ಮತ್ತು ವಿದೇಶಿ ಯಾನಗಳಿಗೆ ಏರ್‌ಇಂಡಿಯಾ ಪ್ರಯಾಣವನ್ನು ಕಡ್ಡಾಯಗೊಳಿಸಲಾಗಿತ್ತು. ಬುಧವಾರದ ನಿರ್ದೇಶವು 2009ರ ಆದೇಶವನ್ನು ರದ್ದುಗೊಳಿಸಿದೆ.

ಈ ಹಿಂದೆ ಏರ್‌ಇಂಡಿಯಾ ಆರ್‌ಟಿಐ ಅರ್ಜಿಯೊಂದಕ್ಕೆ ನೀಡಿದ್ದ ಉತ್ತರದಲ್ಲಿ ಜು.27ಕ್ಕೆ ಇದ್ದಂತೆ ಕೇಂದ್ರ ಸರಕಾರದಿಂದ ತನಗೆ 33.69 ಕೋ.ರೂ. ಬಾಕಿಯಿದೆ ಎಂದು ತಿಳಿಸಿತ್ತು. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪ್ರಯಾಣದ ಬಾಬ್ತು 7.19 ಕೋ.ರೂ.,ರಾಷ್ಟ್ರಪತಿಗಳ ಪ್ರಯಾಣದ ಬಾಬ್ತು 6.12 ಕೋ.ರೂ. ಮತ್ತು ಉಪರಾಷ್ಟ್ರಪತಿಗಳ ಪ್ರಯಾಣದ ಬಾಬ್ತು 10.21 ಕೋ.ರೂ.ಗಳ ಬಾಕಿಗಳು ಸೇರಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News