ಉತ್ತರ ಪ್ರದೇಶದ ಎನ್‌ಸಿಆರ್ ನಲ್ಲಿ ಪಟಾಕಿ ಮಾರಾಟ, ಬಳಕೆಗೆ ನಿಷೇಧ
ಲಕ್ನೊ: ರಾಷ್ಟ್ರೀಯ ರಾಜಧಾನಿ ಪ್ರದೇಶ (ಎನ್‌ಸಿಆರ್) ಹಾಗೂ ರಾಜ್ಯದ ಇತರ ನಗರಗಳಲ್ಲಿ ಸುತ್ತುವರಿದ ಗಾಳಿಯ ಗುಣಮಟ್ಟ ಕಳಪೆಯಾಗಿರುವ ಕಾರಣ ಈ ವರ್ಷ ದೀಪಾವಳಿ ಹಾಗೂ ಇತರ ಮುಂಬರುವ ಹಬ್ಬಗಳಲ್ಲಿ ಪಟಾಕಿ ಮಾರಾಟ ಮತ್ತು ಬಳಕೆಯನ್ನು ಉತ್ತರಪ್ರದೇಶ ಸರಕಾರ ಶುಕ್ರವಾರ ನಿಷೇಧಿಸಿದೆ.
'ಮಧ್ಯಮ' ಗಾಳಿಯ ಗುಣಮಟ್ಟ ಹೊಂದಿರುವ ನಗರಗಳಲ್ಲಿ ಪಟಾಕಿಗಳನ್ನು ನಿರ್ಬಂಧಿಸಲಾಗುವುದು ಎಂದು ರಾಜ್ಯ ಗೃಹ ಇಲಾಖೆ ಹೇಳಿದೆ. ಆದಾಗ್ಯೂ, ಹಸಿರು ಪಟಾಕಿಗಳನ್ನು ಬಳಸಬಹುದು. ಆದರೆ ಎರಡು ಗಂಟೆಗಳಿಗಿಂತ ಹೆಚ್ಚು ಬಳಸುವಂತಿಲ್ಲ.
ಗಾಳಿಯ ಗುಣಮಟ್ಟ 'ಮಧ್ಯಮ' ಅಥವಾ ಕಡಿಮೆ ಇರುವಲ್ಲಿ ಮಾತ್ರ ಕ್ರಿಸ್ಮಸ್ ಮತ್ತು ಹೊಸ ವರ್ಷದ ಸಮಯದಲ್ಲಿ ಹಸಿರು ಪಟಾಕಿಗಳನ್ನು ರಾತ್ರಿ 11:55 ರಿಂದ 12:30 ರವರೆಗೆ ಬಳಸಬಹುದು.
ನಿಗದಿತ ಹಬ್ಬಗಳನ್ನು ಹೊರತುಪಡಿಸಿ ಇತರ ಕಾರಣಗಳಿಗಾಗಿ ಪಟಾಕಿಗಳ ಬಳಕೆಗೆ ಸಂಬಂಧಿಸಿದಂತೆ ಪ್ರದೇಶದ ಜಿಲ್ಲಾಧಿಕಾರಿಗಳ ಪೂರ್ವಾನುಮತಿ ಅಗತ್ಯವಿದೆ ಮತ್ತು ಅನುಮತಿ ನೀಡಿದರೆ ಸೀಮಿತ ಅವಧಿಯವರೆಗೆ ಗಾಳಿಯ ಗುಣಮಟ್ಟವನ್ನು ಆಧರಿಸಿ ಅನುಮತಿಸಲಾಗುತ್ತದೆ.