×
Ad

ಮನ್‍ರೇಗಾ ಬೊಕ್ಕಸದಲ್ಲಿಲ್ಲ ಹಣ: 21 ರಾಜ್ಯಗಳು ಸಂಕಷ್ಟದಲ್ಲಿ

Update: 2021-10-30 16:02 IST
ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ಕೇಂದ್ರ ಸರಕಾರದ ಪ್ರಮುಖ ಯೋಜನೆಗಳಲ್ಲೊಂದಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಈ ವಿತ್ತ ವರ್ಷ ಪ್ರಥಮಾರ್ಧ ದಾಟುತ್ತಿದ್ದಂತೆಯೇ ಆರ್ಥಿಕ ಕೊರತೆಯನ್ನೆದುರಿಸಲಾರಂಭಿಸಿದೆ. ಯೋಜನೆಯ ವಿತ್ತೀಯ ಹೇಳಿಕೆಯ ಪ್ರಕಾರ ನಿವ್ವಳ ಖೋತಾ(ನೆಗೆಟಿವ್ ನೆಟ್ ಬ್ಯಾಲೆನ್ಸ್) ರೂ. 8,686 ಕೋಟಿ ಆಗಿದೆ ಎಂದು thehindu.com ವರದಿ ಮಾಡಿದೆ.

ರಾಜ್ಯಗಳು ತಮ್ಮದೇ ಬೊಕ್ಕಸದಿಂದ ಹಣಸಂದಾಯವನ್ನು ಕಾರ್ಮಿಕರಿಗೆ ಮಾಡಿ ನಂತರ ಸಾಮಗ್ರಿ ವೆಚ್ಚವನ್ನೂ ಭರಿಸದೇ ಇದ್ದಲ್ಲಿ ಕಾರ್ಮಿಕರಿಗೆ ವೇತನ ಪಾವತಿ ವಿಳಂಬವಾಗಲಿದೆ. ಸದ್ಯದ ಆರ್ಥಿಕ ಸಂಕಷ್ಟ ಪರಿಸ್ಥಿತಿಯಲ್ಲಿ ವಿಳಂಬ ವೇತನ ಪಾವತಿ ಹೊರತಾಗಿಯೂ ಕಾರ್ಮಿಕರಿಂದ ಬಲವಂತದ ಕಾಮಗಾರಿ ನಡೆಸಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರರು ಹೇಳುತ್ತಿದ್ದಾರೆ.

ಆದರೆ ಹಲವು ರಾಜ್ಯಗಳು ತಳಮಟ್ಟದಲ್ಲಿ ಕೆಲಸಕ್ಕಾಗಿ ಕೃತಕ ಬೇಡಿಕೆ ಸೃಷ್ಟಿಸುತ್ತಿವೆ ಎಂದು ಕೇಂದ್ರ ಈಗ ಆರೋಪಿಸಿದೆ.

ಕಳೆದ ವರ್ಷದ ಕೋವಿಡ್ ಲಾಕ್‍ಡೌನ್ ಸಂದರ್ಭ ಈ ಯೋಜನೆಗೆ ಗರಿಷ್ಠ ರೂ 1.11 ಲಕ್ಷ ಕೋಟಿ ಮೀಸಲಿರಿಸಿದ್ದ ಕಾರಣ ದಾಖಲೆ 11 ಕೋಟಿ ಕಾರ್ಮಿಕರಿಗೆ ನೆರವಾಗಿತ್ತು.

ಆದರೆ ಆರ್ಥಿಕ ವರ್ಷ 2021-22 ಬಜೆಟಿನಲ್ಲಿ ಈ ಯೋಜನೆಗೆ ರೂ 73,000 ಕೋಟಿ ಮೀಸಲಿರಿಸಲಾಗಿತ್ತು, ಇದು ಸಾಲದೇ ಇದ್ದಲ್ಲಿ ಮತ್ತಷ್ಟು ಅನುದಾನ ಒದಗಿಸುವುದಾಗಿ ಕೇಂದ್ರ ತಿಳಿಸಿತ್ತು.

ಅಕ್ಟೋಬರ್ 29ರಲ್ಲಿದ್ದಂತೆ ಬಾಕಿ ಪಾವತಿ ಮೊತ್ತ ರೂ. 79,810 ಕೋಟಿ ಆಗಿದೆ. ಒಟ್ಟು 21 ರಾಜ್ಯಗಳು ನೆಗೆಟಿವ್ ನೆಟ್ ಬ್ಯಾಲೆನ್ಸ್ ತೋರಿಸಿದ್ದು ಆಂಧ್ರ ಪ್ರದೇಶ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ಗರಿಷ್ಠ ಬಾಧಿತ ರಾಜ್ಯಗಳಾಗಿವೆ.

ರಾಜ್ಯಗಳು ತಳಮಟ್ಟದಲ್ಲಿ ಕೃತಕ ಬೇಡಿಕೆ ಸೃಷ್ಟಿಸುತ್ತಿವೆ ಎಂಬ ವಾದವನ್ನು ಸಾಮಾಜಿಕ ಹೋರಾಟಗಾರರು ತಿರಸ್ಕರಿಸುತ್ತಾರೆ. ಕೆಲಸ ಕೇಳಿದ ಶೇ 13ರಷ್ಟು ಮಂದಿಗೆ ಕೆಲಸ ದೊರಕಿಲ್ಲ ಎಂದು ಅವರು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News