×
Ad

ದೇವಸ್ಥಾನದಲ್ಲಿ ನರಿಕುರವರ್ ಸಮುದಾಯದ ಜನರೊಂದಿಗೆ ಕುಳಿತು ಊಟ ಮಾಡಿದ ತಮಿಳುನಾಡು ಸಚಿವ

Update: 2021-10-30 18:11 IST
Photo: Twitter/@PKSekarbabu

ಚೆನ್ನೈ: ತಮಿಳುನಾಡಿನ ಹಿಂದು ಧಾರ್ಮಿಕ ಮತ್ತು ದತ್ತಿ ಸಚಿವ ಪಿ ಕೆ ಶೇಖರ್ ಬಾಬು ಶುಕ್ರವಾರ ಮಾಮಲ್ಲಪುರಂನ ಸ್ಥಳಸಯನ ಪೆರುಮಾಳ್ ದೇವಸ್ಥಾನದಲ್ಲಿ ನರಿಕುರವರ್ ಸಮುದಾಯದ ಸದಸ್ಯರೊಂದಿಗೆ ಅನ್ನದಾನಂನಲ್ಲಿ ಭಾಗವಹಿಸಿ ಅನ್ನಪ್ರಸಾದ ಸ್ವೀಕರಿಸಿದ್ದಾರೆ.

ಈ ದೇವಸ್ಥಾನದಲ್ಲಿ ತಮ್ಮ ಸಮುದಾಯದ ಸದಸ್ಯರಿಗೆ ಅನ್ನದಾನಂನಲ್ಲಿ ಭಾಗವಹಿಸಲು ಅನುಮತಿಸಲಾಗುತ್ತಿಲ್ಲ ಎಂದು ಪೂಂಚೇರಿ ಗ್ರಾಮದ ಅಶ್ವಿನಿ ಎಂಬಾಕೆ ವೀಡಿಯೋ ಮೂಲಕ ಸಚಿವರಲ್ಲಿ ದೂರಿಕೊಂಡ ನಂತರ ಸಚಿವರು ಈ ಸಮುದಾಯದ ಮಂದಿಯೊಂದಿಗೆ ದೇವಸ್ಥಾನದಲ್ಲಿ ಅನ್ನಪ್ರಸಾದ ಸ್ವೀಕರಿಸಿದ್ದಾರೆ. ಸಮುದಾಯದ ಸದಸ್ಯರಿಗೆ ಧೋತಿ ಮತ್ತು ಸೀರೆಗಳನ್ನೂ ಸಚಿವರು ಹಂಚಿದ್ದಾರೆ ಎಂದು ವರದಿಯಾಗಿದೆ.

ಅಶ್ವಿನಿಯ ವೀಡಿಯೋ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರ ಗಮನಕ್ಕೂ ಬಂದಿತ್ತು. ಸರಕಾರದ ಈ ಯೋಜನೆ ಜಾರಿಯಲ್ಲಾಗುತ್ತಿರುವ ತಾರತಮ್ಯಕಾರಿ ನಿಲುವನ್ನು ಹೋಗಲಾಡಿಸಲು ಸಚಿವರೇ ಸ್ವತಃ ಸಮುದಾಯದ ಮಂದಿಯೊಂದಿಗೆ ದೇವಸ್ಥಾನದಲ್ಲಿ ಅನ್ನಪ್ರಸಾದ ಸ್ವೀಕರಿಸಿದರಲ್ಲದೆ ಯಾವುದೇ ತಾರತಮ್ಯವೆಸಗದೆ ಈ ಯೋಜನೆ ಮುಂದುವರಿಸಿಕೊಂಡು ಹೋಗುವಂತೆ ಸರಕಾರಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ನರಿಕುರವರ್ ಸಮುದಾಯದ ಮಂದಿ ಮೂಲತಃ ಬೇಟೆಗಾರರಾಗಿದ್ದಾರೆ. ಆದರೆ ಈಗ ಅವರು ಮಣಿ ಮತ್ತು ಆಭರಣಗಳನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News