ಅಕ್ಕಿ, ಬೇಳೆ, ಎಣ್ಣೆ , ತುಪ್ಪ ಎಲ್ಲ ಫ್ರೀ.....!

Update: 2021-10-30 19:30 GMT

ಚೌಕೀದಾರರ ಹೊಸ ಹೊಸ ಸಾಧನೆಗಳನ್ನು ವಾಟ್ಸ್‌ಆ್ಯಪ್‌ನಿಂದ ಅಗೆದು ತರುತ್ತಿದ್ದ ಬಸ್ಯಾ ಕಳೆದ ಒಂದು ವಾರಗಳಿಂದ ಪತ್ತೆಯಿಲ್ಲ ಎನ್ನುವುದು ಪತ್ರಕರ್ತ ಎಂಜಲು ಕಾಸಿಗೆ ಸ್ಕೂಪ್ ಸುದ್ದಿಯಾಯಿತು. ನೇರ ಬಸ್ಯನ ಮನೆಯ ಬಾಗಿಲು ತಟ್ಟಿದ. ಆತನ ಪತ್ನಿ ಬಾಗಿಲು ತೆಗೆದಳು.
‘‘ಬಸ್ಯಾ ಇದ್ದಾರಾ....’’ ಕಾಸಿ ಕುತೂಹಲದಿಂದ ಕೇಳಿದ.
‘‘ಹೂಂ ಇದ್ದಾರೆ. ಒಳಗಡೆ ಅಡುಗೆ ಮಾಡ್ತಾ ಇದ್ದಾರೆ....’’ ಪತ್ನಿ ಮೂತಿಯನ್ನು ತಿರುಗುಸಿ ದರದರನೆ ಅಲ್ಲಿಂದ ತೆರಳಿದಳು.
ಕಾಸಿ ಅಂಜುತ್ತಾ ಒಳಗೆ ಇಣುಕಿದ.
‘‘ಏನ್ರೀ ಬಸ್ಯಾ ಅವರೇ ಅಡುಗೆ ಮಾಡ್ತಾ ಇದ್ದೀರಾ...’’ ಕಾಸಿ ಕೇಳಿದ.
 ಬಸ್ಯಾ ಮುಖ ಬಾಡಿತ್ತು...ಆದರೂ ನಗು ತರಿಸಿಕೊಂಡು ಹೇಳಿದ ‘‘ಹಾಗಲ್ಲ....ಈಗಾಗಲೇ ಕೇಂದ್ರದಿಂದ ಒಂದು ಕ್ವಿಂಟಲ್ ಅಕ್ಕಿ, ಒಂದು ಕೆಜಿ ತುಪ್ಪ, ಎರಡು ಗ್ಯಾಸ್ ಸಿಲಿಂಡರ್ ಇತ್ಯಾದಿಗಳನ್ನು ಪುಕ್ಕಟೆ ಕಳುಹಿಸಿದ್ರು. ಆದನ್ನು ಅನ್‌ಲೋಡ್ ಮಾಡಿ ಸುಸ್ತಾಗಿದ್ದೀನಿ....’’
ಕಾಸಿ ರೋಮಾಂಚಿತನಾದ. ‘‘ಏನ್ರೀ....ಅಕ್ಕಿ, ತುಪ್ಪ, ಸಿಲಿಂಡರ್ ಎಲ್ಲ ಪುಕ್ಕಟೆ ಕಳುಹಿಸಿದ್ದಾರಾ?’’ ಕಾಸಿಗಿನ್ನೂ ಬಂದಿರಲಿಲ್ಲ.
‘‘ಹೂಂ...ಕಣ್ರೀ....ನಿಮ್ಮ ಕುಟುಂಬಕ್ಕೆ, ನೆರೆಹೊರೆಗೆ ಬೇಕಾಗುವ ಅಕ್ಕಿ, ಬೇಳೆ ಎಲ್ಲ ಪುಕ್ಕಟೆ ಕಳುಹಿಸುತ್ತಾ ಇದ್ದಾರೆ.... ನಿಮಗಿನ್ನೂ ಬಂದಿಲ್ವಾ...?’’ ಬಸ್ಯಾ ಕೇಳಿದ.
‘‘ಇಲ್ರಾ ಕಣ್ರೀ....’’ ಕಾಸಿ ದುಃಖದಿಂದ ಹೇಳಿದ.
 ‘‘ನೀವು ಅದ್ಯಾವುದೋ ಕಾಂಗ್ರೆಸ್‌ನೋರ ಮಾತು ಕೇಳಿ ಚೌಕೀದಾರರ ಬಗ್ಗೆ ಇಲ್ಲದ್ದೆಲ್ಲ ಬರೀತಾ ಇದ್ರೆ ಹೇಗೆ ಬರತ್ತೆ ಹೇಳಿ. ಇನ್ನು ಎಲ್ಲವನ್ನು ಡೈರಕ್ಟಾಗಿ ಕೇಂದ್ರದಿಂದಲೇ ಪುಕ್ಕಟೆಯಾಗಿ ಕಳುಹಿಸುತ್ತಾರೆ. ನಾವು ದುಡೀಬೇಕಾಗಿಯೇ ಇಲ್ಲ. ಎಲ್ಲ ಫ್ರೀ....’’ ಬಸ್ಯಾ ಹೇಳುತ್ತಿದ್ದಂತೆಯೇ ಕಾಸಿ ರೋಮಾಂಚಿತನಾದ. ರಾಜೀನಾಮೆಯನ್ನು ಸಂಪಾದಕರ ಮುಖಕ್ಕೆ ಬಿಸಾಕಿ ಆರಾಮವಾಗಿ ಮನೆಯಲ್ಲಿ ಕಾಲು ಚಾಚಿ ಬದುಕುವ ಕನಸನ್ನು ನಿಂತಲ್ಲೇ ಕಾಣ ತೊಡಗಿದ.‘‘ಬಸ್ಯಾ ಅವರೇ...ನನಗೂ ಪುಕ್ಕಟೆ ಸಿಗುವ ಹಾಗೆ ಮಾಡಿ...’’ ಅಂಗಲಾಚಿದ.
‘‘ಮಾಡೋಣ...ಮಾಡೋಣ....ಈಗ ಪುಕ್ಕಟೆ ಅಕ್ಕಿ ಬೇಳೆ ಮಾತ್ರ ಕಳುಹಿಸುತ್ತಾ ಇದ್ದಾರೆ. ಮುಂದಿನ ದಿನಗಳಲ್ಲಿ ಮನೆ ಮನೆಗೆ ಅಡುಗೆ ಮಾಡಿಯೇ ಕಳುಹಿಸುತ್ತಾರಂತೆ. ವೆಜ್ ಬಿರಿಯಾನಿ, ವೆಜ್ ಪಲಾವ್...ಬೇಕಾದವರಿಗೆ ಬೇಕಾದ ಅಡುಗೆ....ಸಿಲಿಂಡರ್ ಮುಗೀತು ಅನ್ನೋ ಅಂಗಿಲ್ಲ. ಪೆಟ್ರೋಲ್ ಬೆಲೆ ಏರಿತು ಎನ್ನುವ ಹಾಗಿಲ್ಲ....’’ ಬಸ್ಯಾ ತನ್ನ ಚೌಕೀದಾರರ ಕಾರುಣ್ಯವನ್ನು ವರ್ಣಿಸತೊಡಗಿದ.
 ಕಾಸಿ ಸ್ವರ್ಗವೇ ಧರೆಗಿಳಿಯಿತು ಎಂದು ಸಂಭ್ರಮಿಸಿದ...‘‘ನನಗೆ ಈಗ ಪುಕ್ಕಟೆ ಅಕ್ಕಿ ಬೇಳೆಯೇ ಸಾಕು. ದಯವಿಟ್ಟು ಚೌಕೀದಾರರಿಗೆ ಕಳುಹಿಸೋಕೆ ಹೇಳಿ....ನನ್ನ ಆಧಾರ್ ಕಾರ್ಡ್ ಕಿಸೆಯಲ್ಲೇ ಇದೆ...ಕೊಡ್ಲಾ...?’’ ಕಾಸಿ ಜೊಲ್ಲು ಸುರಿಸುತ್ತಾ ಕೇಳಿದ.
ಅಷ್ಟರಲ್ಲಿ ಅಲ್ಲಿಗೆ ಧುರಧುರನೆ ಬಸ್ಯಾ ಹೆಂಡತಿ ಬಂದಳು ‘‘ಅಲ್ಲ ಮಾರಾಯ...ಅದು ಹೇಳುತ್ತೆ ಅಂತ ನೀನು ಕೇಳ್ತಾ ಇದ್ದೀಯಲ್ಲ. ನೀನು ಯಾವ ಸೀಮೆ ಪತ್ರಕರ್ತ ಮಾರಾಯ....ಇವತ್ತು ಆ ಬಸ್ಯಾ ಮತ್ತು ನಿನ್ನನ್ನು ಸೇರಿಸಿ ಒಲೆಗೆ ಹಾಕಿ ನೀರು ಕಾಯ್ಸಿತೀನಿ....’’ ಅಬ್ಬರಿಸಿದಳು.
‘‘ಅದಲ್ಲ...ಬಸ್ಯಾ ಹೇಳ್ತಾ ಇದ್ದಾರೆ ಅಕ್ಕಿ, ಬೇಳೆ ಎಲ್ಲ ಪುಕ್ಕಟೆ ಕಳುಹಿಸುತ್ತಾ ಇದ್ದಾರಂತೆ. ಮುಂದೆ ಬಿಸಿ ಬಿಸಿ ಅನ್ನವನ್ನೇ ಬೇಯಿಸಿ ಕಳುಹಿಸುತ್ತಾರಂತೆ....’’ ಕಾಸಿ ಅಂಜುತ್ತಾ ಕೇಳಿದ.
‘‘ಕಳುಹಿಸುತ್ತಾರೆ....ಕಳುಹಿಸುತ್ತಾರೆ....ನಿನ್ನತ್ರಾ ವಾಟ್ಸ್‌ಆ್ಯಪ್ ಇದೆಯಲ್ಲ. ಅದರಲ್ಲಿ ಅಕ್ಕಿ ಬೇಳೆ ಚಿತ್ರಗಳನ್ನು ಕಳುಹಿಸುತ್ತಾರೆ. ನೀನು ಮತ್ತು ಆ ಬಸ್ಯಾ ಇದ್ದಾನಲ್ಲ ಜೊತೆಗೂಡಿ ಡೌನ್‌ಲೋಡ್ ಮಾಡಿ ಅದನ್ನು ಬೇಯಿಸಿ ತಿನ್ನಿ....’’
‘‘ಅಂದ್ರೇ...?’’ ಕಾಸಿ ಅರ್ಥವಾಗದೆ ಕೇಳಿದ.
‘‘ಅದೇ ವಾಟ್ಸ್‌ಆ್ಯಪ್‌ನಲ್ಲಿ ಎಲ್ಲ ಫ್ರೀಯಾಗಿ ಕಳುಹಿಸುತ್ತಾರಂತೆ...ಅದನ್ನು ಡೌನ್‌ಲೋಡ್ ಮಾಡ್ಕೋಬೇಕಂತೆ...’’ ಬಸ್ಯಾನ ಪತ್ನಿ ಹೇಳಿದಳು.

ಅಷ್ಟರಲ್ಲಿ ಬಸ್ಯಾ ಕೂಗಿ ಹೇಳಿದ ‘‘ಕಾಸಿಯವ್ರೇ....ನೋಡಿ ಒಂದು ಕ್ವಿಂಟಲ್ ಅಕ್ಕಿ, ಒಂದು ಕಿಲೋ ಬೇಳೆ, ಎಣ್ಣೆ , ತುಪ್ಪ ನಿಮ್ಮ ವಾಟ್ಸ್‌ಆ್ಯಪ್ ನಂಬರ್‌ಗೆ ಫಾರ್‌ವರ್ಡ್ ಮಾಡಿದ್ದೇನೆ. ಡೌನ್‌ಲೋಡ್ ಮಾಡ್ಕೊಳ್ಳಿ....ಫ್ರೀ....ಎಲ್ಲಾ ಫ್ರೀ....’’

Writer - *ಚೇಳಯ್ಯ chelayya@gmail.com

contributor

Editor - *ಚೇಳಯ್ಯ chelayya@gmail.com

contributor

Similar News