×
Ad

ಪ್ರಯಾಣಿಕ ಹಡಗಿನಲ್ಲಿ ಮಾದಕ ದ್ರವ್ಯ ಪತ್ತೆ ಪ್ರಕರಣ: ಮತ್ತೆ 7 ಆರೋಪಿಗಳಿಗೆ ಜಾಮೀನು

Update: 2021-10-30 23:34 IST

ಮುಂಬೈ, ಅ. 30: ಬಾಲಿವುಡ್ ನಟ ಶಾರುಕ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಆರೋಪಿಯಾಗಿರುವ ಪ್ರಯಾಣಿಕ ಹಡಗಿನಲ್ಲಿ ಮಾದಕ ದ್ರವ್ಯ ಪತ್ತೆ ಪ್ರಕರಣದಲ್ಲಿ ಬಂಧಿತರಾಗಿದ್ದ ಅಚಿತ್ ಕುಮಾರ್ ಹಾಗೂ ಇತರ 6 ಮಂದಿಗೆ ಮುಂಬೈಯ ವಿಶೇಷ ನ್ಯಾಯಾಲಯ ಶನಿವಾರ ಜಾಮೀನು ಮಂಜೂರು ಮಾಡಿದೆ.

ಎನ್‌ಡಿಪಿಎಸ್ ಕಾಯ್ದೆಗೆ ಸಂಬಂಧಿಸಿದ ಪ್ರಕರಣವನ್ನು ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ವಿ.ವಿ. ಪಾಟೀಲ್ 7 ಮಂದಿಗೆ ಜಾಮೀನು ನೀಡಿದರು. ಇದರೊಂದಿಗೆ ಈ ಪ್ರಕರಣದಲ್ಲಿ ಬಂಧಿತರಾದ 20 ಮಂದಿ ಆರೋಪಿಗಳಲ್ಲಿ ಇದುವರೆಗೆ 12 ಮಂದಿಗೆ ಜಾಮೀನು ಸಿಕ್ಕಿದಂತಾಗಿದೆ.

ಈ ಹಿಂದೆ ಎನ್‌ಡಿಪಿಎಸ್ ನ್ಯಾಯಾಲಯ ಆರ್ಯನ್ ಖಾನ್‌ಗೆ ಜಾಮೀನು ನಿರಾಕರಿಸಿತ್ತು. ಆದರೆ, ಬಾಂಬೆ ಉಚ್ಚ ನ್ಯಾಯಾಲಯ ಆರ್ಯನ್ ಖಾನ್ ಹಾಗೂ ಇತರ ಇಬ್ಬರು ಸಹ ಆರೋಪಿಗಳಾದ ಅರ್ಬಾಝ್ ಮರ್ಚಂಟ್ ಹಾಗೂ ಮುನ್‌ಮುನ್ ಧಮೇಚಾಗೆ ಗುರುವಾರ ಜಾಮೀನು ಮಂಜೂರು ಮಾಡಿತ್ತು. ಆರ್ಯನ್ ಖಾನ್ ಹಾಗೂ ಅರ್ಬಾಝ್ ಮರ್ಚಂಟ್ ಅವರ ಹೇಳಿಕೆಯ ಆಧಾರದಲ್ಲಿ ಅಚಿತ್ ಕುಮಾರ್‌ನನ್ನು ಬಂಧಿಸಲಾಗಿದೆ ಎಂದು ಎನ್‌ಸಿಬಿ ಪ್ರತಿಪಾದಿಸಿತ್ತು. ಈತ ಆರ್ಯನ್ ಖಾನ್‌ಗೆ ಮಾದಕ ದ್ರವ್ಯ ಪೂರೈಸುತ್ತಿದ್ದ ಎಂದು ಎನ್‌ಸಿಬಿ ಹೇಳಿತ್ತು. ವಿಶೇಷ ನ್ಯಾಯಾಲಯ ಶನಿವಾರ ಜಾಮೀನು ಮಂಜೂರು ಮಾಡಿದ ಇತರ ಆರೋಪಿಗಳೆಂದರೆ ನೂಪುರ್ ಸತಿಜಾ, ಗೋಮಿತ್ ಚೋಪ್ರಾ, ಗೋಪಾಲ್‌ಜಿ. ಆನಂದ್, ಸಮೀರ್ ಸೆಹಗಲ್, ಮಾನವ್ ಸಿಂಘಾಲ್ ಹಾಗೂ ಭಾಸ್ಕರ್ ಅರೋರಾ.

ವಿಶೇಷ ನ್ಯಾಯಾಲಯ ಅಕ್ಟೋಬರ್ 26ರಂದು ಪ್ರಕರಣದ ಇತರ ಇಬ್ಬರು ಆರೋಪಿಗಳಾದ ಮನೀಶ್ ರಾಜ್‌ಗರಿಯಾ ಹಾಗೂ ಅವಿನ್ ಸಾಹುಗೆ ಜಾಮೀನು ನೀಡಿತ್ತು. ಈ ಪ್ರಕರಣದಲ್ಲಿ ಮೊದಲ ಜಾಮೀನು ಪಡೆದುಕೊಂಡವರು ಇವರಿಬ್ಬರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News