ಪರಿಶಿಷ್ಟ ಜಾತಿ/ವರ್ಗ ವಿದ್ಯಾರ್ಥಿವೇತನ ನಿಧಿಯನ್ನು ರಸ್ತೆ, ಕಟ್ಟಡ ಕಾಮಗಾರಿಗಳಿಗೆ ವಿನಿಯೋಗಿಸಿದ್ದ ಬಿಹಾರ ಸರಕಾರ

Update: 2021-11-01 10:44 GMT
Photo: Indianexpress

ಪಾಟ್ನಾ: ಪರಿಶಿಷ್ಟ ಜಾತಿ/ವರ್ಗದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನಕ್ಕೆಂದು ಮೀಸಲಿರಿಸಲಾಗಿದ್ದ ರೂ. 8,800 ಕೋಟಿಗೂ ಅಧಿಕ ನಿಧಿಯನ್ನು 2018-19ರಲ್ಲಿ ಬಿಹಾರ ಸರಕಾರವು ರಸ್ತೆಗಳು, ಸರಕಾರಿ ಕಟ್ಟಡಗಳು ಹೀಗೆ ಹತ್ತು ಹಲವು ಕಾಮಗಾರಿಗಳ ಜಾರಿಗೆ ವಿನಿಯೋಗಿಸಿತ್ತೆಂಬುದು ಬೆಳಕಿಗೆ ಬಂದಿದೆ. ಅಚ್ಚರಿಯೆಂದರೆ ಸುಮಾರು ಆರು ವರ್ಷಗಳ ಕಾಲ ಬಿಹಾರ ಸರಕಾರವು ಹಲವಾರು ಅರ್ಹ ವಿದ್ಯಾರ್ಥಿಗಳಿಗೆ ಆರ್ಥಿಕ ಕೊರತೆಯ ನೆಪವೊಡ್ಡಿ ವಿದ್ಯಾರ್ಥಿವೇತನ ನಿರಾಕರಿಸಿತ್ತು ಎಂದು indianexpress.com ವರದಿ ಮಾಡಿದೆ. 

ಸಿಎಜಿ ತನ್ನ 2018-19 ವರದಿಯಲ್ಲಿ ಈ ವಿಚಾರ ಎತ್ತಿತ್ತಲ್ಲದೆ  ಪರಿಶಿಷ್ಟ ಜಾತಿ ಉಪ ಯೋಜನೆಯ ನಿಧಿಯನ್ನು ಬೇರೆ ಉದ್ದೇಶಗಳಿಗೆ ಬಳಸಿದ್ದನ್ನು ಗಂಭೀರವಾಗಿ ಪರಿಗಣಿಸಿತ್ತು. ಈ ಯೋಜನೆಯ ನಿಧಿಯನ್ನು ವಾರ್ಷಿಕ ಆದಾಯ ರೂ 2.5 ಲಕ್ಷಕ್ಕಿಂತ ಕಡಿಮೆಯಿದ್ದ ಕುಟುಂಬಗಳಿಂದ ಬಂದ ಪರಿಶಿಷ್ಟ ಜಾತಿ/ವರ್ಗಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಒದಗಿಸಲು ಬಳಸಬೇಕೆಂದು  ನೀತಿ ಆಯೋಗ ಸ್ಪಷ್ಟವಾಗಿ ಹೇಳಿತ್ತು.

ಆಗಸ್ಟ್ 10ರ ಮಾಧ್ಯಮ ವರದಿಯೊಂದರ ಪ್ರಕಾರ ಬಿಹಾರ ಸರಕಾರವು ಪರಿಶಿಷ್ಟ ಜಾತಿ/ವರ್ಗಗಳ ವಿದ್ಯಾರ್ಥಿಗಳಿಗೆ ತನ್ನ ವೆಬ್‍ಸೈಟ್‍ನ ತಾಂತ್ರಿಕ ದೋಷದ ನೆಪವೊಡ್ಡಿ ಮೂರು ವರ್ಷ ವಿದ್ಯಾರ್ಥಿವೇತನ ನಿರಾಕರಿಸಿತ್ತು. ಹತ್ತನೇ ತರಗತಿ ನಂತರ ಹಾಗೂ ಸ್ನಾತ್ತಕೋತ್ತ ಶಿಕ್ಷಣದ ತನಕದ ವಿದ್ಯಾರ್ಥಿಗಳಿಗೆ  ನೀಡಲಾಗುವ ವಿದ್ಯಾರ್ಥಿವೇತನದ ಶೇ 60ರಷ್ಟನ್ನು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ  ಭರಿಸುತ್ತದೆ.

ಈ ವಿದ್ಯಾರ್ಥಿವೇತನ ನಿಧಿಯ ರೂ 2,076.99 ಕೋಟಿ ಹಣವನ್ನು ವಿದ್ಯುತ್ ಇಲಾಖೆಗೆ ಒದಗಿಸಿದ್ದ ಸರಕಾರ ರೂ 3,081.34 ಕೊಟಿಯನ್ನು ಪ್ರಮುಖ ರಸ್ತೆ ಯೋಜನೆಗಳಿಗೆ ವಿನಿಯೋಗಿಸಿತ್ತು. ರೂ 1,222.94 ಕೋಟಿ ಮೊತ್ತವನ್ನು ವೈದ್ಯಕೀಯ ಕಾಲೇಜುಗಳಿಗೆ ಹಾಗೂ ರೂ 1,202.23 ಕೋಟಿ ಮೊತ್ತವನ್ನು ಪ್ರವಾಹ ನಿಯಂತ್ರಣ ಯೋಜನೆಗಳಿಗೆ ವಿನಿಯೋಗಿಸಿತ್ತು ಎಂದು ತಿಳಿದು ಬಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News