×
Ad

ಹಿಮಾಚಲಪ್ರದೇಶ: 3 ವಿಧಾನಸಭೆ, 1 ಲೋಕಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಜಯ, ಬಿಜೆಪಿಗೆ ಮುಖಭಂಗ

Update: 2021-11-02 15:22 IST

ಹೊಸದಿಲ್ಲಿ,ನ.2: ಮುಂದಿನ ವರ್ಷ ನಡೆಯಲಿರುವ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಗೆ ಮುನ್ನ ಬಿಜೆಪಿಯ ಪಾಲಿಗೆ ಸತ್ವಪರೀಕ್ಷೆಯಾಗಿದ್ದ ಉಪಚುನಾವಣೆಗಳಲ್ಲಿ ಪಕ್ಷವು ತೀವ್ರ ಮುಖಭಂಗವನ್ನು ಅನುಭವಿಸಿದೆ. ಮಂಗಳವಾರ ಉಪಚುನಾವಣೆಗಳ ಫಲಿತಾಂಶಗಳು ಪ್ರಕಟಗೊಂಡಿದ್ದು ಮಂಡಿ ಲೋಕಸಭಾ ಕ್ಷೇತ್ರದ ಜೊತೆಗೆ ಫತೇಪುರ,ಅರ್ಕಿ ಮತ್ತು ಜುಬ್ಬಲ್-ಕೋಟಖಾಯಿ ವಿಧಾನಸಭಾ ಕ್ಷೇತ್ರಗಳನ್ನೂ ಕಾಂಗ್ರೆಸ್ ಗೆದ್ದುಕೊಂಡಿದೆ.

ಮಂಡಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಆರು ಬಾರಿ ಹಿಮಾಚಲ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ದಿ.ವೀರಭದ್ರ ಸಿಂಗ್ ಅವರ ಪತ್ನಿ ಪ್ರತಿಭಾ ಸಿಂಗ್ ಅವರು ಬಿಜೆಪಿ ಅಭ್ಯರ್ಥಿ ಹಾಗೂ ಕಾರ್ಗಿಲ್ ಯುದ್ಧದ ಹೀರೊ ಬ್ರಿಗೇಡಿಯರ್ (ನಿವೃತ್ತ) ಕುಶಲಚಂದ್ ಠಾಕೂರ್ ಅವರನ್ನು 8,766 ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ. ಕೋವಿಡೋತ್ತರ ಸಮಸ್ಯೆಗಳಿಂದಾಗಿ ಸಿಂಗ್ ನಿಧನದ ಬಳಿಕ ಅವರ ಕುಟುಂಬದ ಸದಸ್ಯರು ಚುನಾವಣೆಯಲ್ಲಿ ಸ್ಪರ್ಧಿಸಿದ್ದು ಇದೇ ಮೊದಲ ಬಾರಿಯಾಗಿದೆ.

ಮಂಡಿ ಲೋಕಸಭಾ ಕ್ಷೇತ್ರವು ವಿಶ್ವದಲ್ಲಿಯೇ ಅತ್ಯಂತ ಎತ್ತರದಲ್ಲಿರುವ ಮತಗಟ್ಟೆಯನ್ನು ಹೊಂದಿದೆ. ಬುಡಕಟ್ಟು ಜಿಲ್ಲೆ ಲಹಾವುಲ್-ಸ್ಪಿತಿಯಲ್ಲಿರುವ ತ್ಶಿಗಾಂಗ್ ಮತಗಟ್ಟೆ ಸಮುದ್ರಮಟ್ಟದಿಂದ 15,256 ಅಡಿ ಎತ್ತರದಲ್ಲಿದೆ. ಮಂಡಿ ಲೋಕಸಭಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಜೈರಾಮ ಠಾಕೂರ್ ಮತ್ತು ದಿ.ಸಿಂಗ್ ಕುಟುಂಬದ ಪ್ರತಿಷ್ಠೆಗಳು ಪಣಕ್ಕೊಡ್ಡಲ್ಪಟ್ಟಿದ್ದವು. ಮಂಡಿ ತವರು ಜಿಲ್ಲೆಯಾಗಿರುವ ಠಾಕೂರ್‌ಗೆ ಬಿಜೆಪಿ ಅಭ್ಯರ್ಥಿಯ ಗೆಲುವನ್ನು ಖಚಿತಪಡಿಸುವುದು ಸತ್ವಪರೀಕ್ಷೆಯಾಗಿ ಪರಿಣಮಿಸಿತ್ತು.

 ಜುಬ್ಬಲ್-ಕೋಟಖಾಯಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರೋಹಿತ್ ಠಾಕೂರ್ ಅವರು ಬಿಜೆಪಿಯ ಬಂಡುಕೋರ ಮತ್ತು ಸ್ವತಂತ್ರ ಅಭ್ಯರ್ಥಿ,ಮಾಜಿ ಕೃಷಿ ಸಚಿವ ದಿ.ನರೇಂದ್ರ ಬ್ರಗ್ತಾರ ಪುತ್ರ ಚೇತನ್ ಬ್ರಗ್ತಾರನ್ನು ಸುಮಾರು 6,000 ಮತಗಳ ಅಂತರದಿಂದ ಸೋಲಿಸಿದರೆ,ಅರ್ಕಿ ಮತ್ತು ಫತೇಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಾದ ಸಂಜಯ ಅವಸ್ಥಿ ಮತ್ತು ಭವಾನಿಸಿಂಗ್ ಪಥಾನಿಯಾ ಅವರು ಗೆಲುವು ಸಾಧಿಸಿದ್ದಾರೆ.

ಹಾಲಿ ಜನಪ್ರತಿನಿಧಿಗಳ ನಿಧನಗಳಿಂದಾಗಿ ತೆರವುಗೊಂಡಿದ್ದ ಮಂಡಿ ಲೋಕಸಭಾ ಕ್ಷೇತ್ರ ಮತ್ತು ಇತರ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಅ.30ರಂದು ಉಪಚುನಾವಣೆಗಳು ನಡೆದಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News