ಜಮ್ಮು-ಕಾಶ್ಮೀರ:ಆಕ್ಷೇಪಾರ್ಹ ಹೇಳಿಕೆಗೆ ಪಕ್ಷದ ನಾಯಕನನ್ನು ವಜಾಗೊಳಿಸಿದ ಬಿಜೆಪಿ
ಜಮ್ಮು: ಮುಸ್ಲಿಮರ ವಿರುದ್ಧದ ‘ಅಸ್ವೀಕಾರಾರ್ಹ’ಹೇಳಿಕೆಗೆ ಪಕ್ಷದಿಂದ ಟೀಕೆಗೊಳಗಾದ ಒಂದು ದಿನದ ನಂತರ ಬಿಜೆಪಿಯ ವಿಕ್ರಮ್ ರಾಂಧವಾ ವಿರುದ್ಧ ಜಮ್ಮು ಹಾಗೂ ಕಾಶ್ಮೀರದಲ್ಲಿ ಪ್ರಕರಣ ದಾಖಲಿಸಲಾಗಿದೆ. ಭಾರತ ವಿರುದ್ಧದ ಟ್ವೆಂಟಿ- 20 ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನ ಗೆದ್ದ ನಂತರ ಜಮ್ಮುವಿನ ಮಾಜಿ ಶಾಸಕ ವೀಡಿಯೊವೊಂದರಲ್ಲಿ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡುತ್ತಿರುವುದು ಕಂಡುಬಂದಿದೆ. ರಾಂಧವ ಅವರನ್ನು ಪಕ್ಷದ ಎಲ್ಲಾ ಹುದ್ದೆಗಳಿಂದ ತೆಗೆದುಹಾಕಲಾಗಿದೆ.
ವಿಕ್ರಮ್ ರಾಂಧವ ಅವರಿಗೆ ಬಿಜೆಪಿ ಶೋಕಾಸ್ ನೋಟಿಸ್ ಜಾರಿ ಮಾಡಿದೆ. 48 ಗಂಟೆಯೊಳಗೆ ವಿವರಣೆ ನೀಡಿ ಬಹಿರಂಗ ಕ್ಷಮೆಯಾಚಿಸುವಂತೆ ಪಕ್ಷ ಸೂಚಿಸಿದೆ.
ಈ ವರ್ಷ ರಾಂಧವ ವಿರುದ್ಧ ಬಿಜೆಪಿ ಶೋಕಾಸ್ ನೋಟಿಸ್ ನೀಡಿದ್ದು ಇದು ಎರಡನೇ ಬಾರಿ.
ಈ ಹಿಂದೆ, ರಾಂಧವ ಅವರು ಕೇಂದ್ರ ಸಚಿವ ಡಾ.ಜಿತೇಂದ್ರ ಸಿಂಗ್ ಅವರು ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದಾರೆ ಹಾಗೂ ಬೃಹತ್ ಕಿಕ್‌ಬ್ಯಾಕ್‌ಗಳನ್ನು ಪಡೆದಿದ್ದಾರೆ ಎಂದು ಆರೋಪಿಸಿದ್ದರು.
ರಾಂಧವ ಹೇಳಿಕೆಯು ಪಕ್ಷಕ್ಕೆ ಕಳಂಕ ತಂದಿದೆ ಎಂದು ಶೋಕಾಸ್ ನೋಟಿಸ್‌ನಲ್ಲಿ ಬಿಜೆಪಿ ಹೇಳಿದೆ.