×
Ad

ಮೊದಲ ಬಾರಿಗೆ 'ಕೆಂಪು ವಲಯ’ ಪ್ರವೇಶಿಸಿದ ದೆಹಲಿ ವಾಯು ಗುಣಮಟ್ಟ

Update: 2021-11-03 09:28 IST
ಫೈಲ್ ಪೋಟೊ

ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿ ಮಾಲಿನ್ಯ ಮಟ್ಟ ಮೊದಲ ಬಾರಿಗೆ ಕೆಂಪು ವಲಯವನ್ನು ಪ್ರವೇಶಿಸಿದ್ದು, ದೀಪಾವಳಿ ಸಂದರ್ಭದಲ್ಲಿ ಪಟಾಕಿ ನಿಷೇಧವನ್ನು ಉಲ್ಲಂಘಿಸಿದರೆ ಪರಿಸ್ಥಿತಿ 'ತೀರಾ ಕಳಪೆ’ ಮಟ್ಟದಿಂದ 'ತೀವ್ರ' ಸ್ಥಿತಿಗೆ ಜಾರಲಿದೆ ಎಂದು ಹವಾಮಾನ ತಜ್ಞರು ಎಚ್ಚರಿಸಿದ್ದಾರೆ.

ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) ನಿನ್ನೆ ಸಂಜೆ 303 ಆಗಿದ್ದು, ಈ ಋತುವಿನಲ್ಲಿ ಮೊದಲ ಬಾರಿಗೆ ಕಳಪೆ ಗುಣಮಟ್ಟದಿಂದ ಅತ್ಯಂತ ಕಳಪೆ ಗುಣಮಟ್ಟಕ್ಕೆ ಕುಸಿದಿದೆ. ಮುಂದಿನ ಕೆಲ ದಿನಗಳಲ್ಲಿ ಗಾಳಿಯ ದಿಕ್ಕು ಬದಲಾಗಲಿದ್ದು, ಕಳೆದ ಕೆಲ ದಿನಗಳಿಂದ ಪಂಜಾಬ್ ಹಾಗೂ ಹರ್ಯಾಣವನ್ನು ಬಾಧಿಸುತ್ತಿರುವ ಹೊಲಗಳ ಬೆಂಕಿ ಹಾಗೂ ಹೊಗೆ ರಾಜಧಾನಿಗೆ ಮತ್ತಷ್ಟು ಬಾಧಕವಾಗಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.

ಗುರುವಾರದಿಂದ ಆರಂಭವಾಗುವ ದೀಪಾವಳಿ ಸಂಭ್ರಮದ ವೇಳೆ ಜನರು ಪಟಾಕಿಗಳನ್ನು ಸಿಡಿಸದಿದ್ದರೆ ಮಾತ್ರ ವಾಯು ಗುಣಮಟ್ಟ ಸೂಚ್ಯಂಕವನ್ನು 300ರ ಆಸುಪಾಸಿನಲ್ಲಿ ನಿರ್ವಹಿಸಬಹುದಾಗಿದೆ ಎಂದು ಹವಾಮಾನ ಮುನ್ಸೂಚನಾ ಇಲಾಖೆಯ ವಿಶ್ಲೇಷಣೆಯಲ್ಲಿ ಎಚ್ಚರಿಸಲಾಗಿದೆ. ಆದರೆ ಜನ 2019ರಲ್ಲಿ ಪಟಾಕಿ ಸಿಡಿಸಿದ ಅರ್ಧ ಪ್ರಮಾಣದ ಪಟಾಕಿಯನ್ನು ಈ ಬಾರಿ ಸಿಡಿಸಿದರೂ, ವಾಯುಗುಣಮಟ್ಟ ’ತೀವ್ರ’ ಮಟ್ಟಕ್ಕೆ ಕುಸಿಯಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

"ದೀಪಾವಳಿಯ ಸುತ್ತಮುತ್ತ ಮೂರು ಅಂಶಗಳು ಪ್ರಧಾನ ಪಾತ್ರ ವಹಿಸಲಿವೆ ಎಂದು ನಾವು ಗುರುತಿಸಿದ್ದೇವೆ. ಅವುಗಳೆಂದರೆ ಸುಮಾರು 4000ದಷ್ಟು ಹೊಲಗಳ ಬೆಂಕಿ ಪ್ರಕರಣಗಳ ಪೈಕಿ ಶೇಕಡ 40ರಷ್ಟು ನವೆಂಬರ್ 5ರಂದು ಸಂಭವಿಸಲಿವೆ, ದೆಹಲಿಯಲ್ಲಿ ಸ್ಥಳೀಯ ಮಾರುತ ಮಂದವಾಗಲಿವೆ. ಇದರ ಜತೆಗೆ ದೆಹಲಿ ಜನತೆ ಎಷ್ಟು ಪಟಾಕಿ ಸಿಡಿಸುತ್ತಾರೆ ಎನ್ನುವುದು ನಿರ್ಣಾಯಕವಾಗಲಿದೆ. ಪಟಾಕಿ ಸಿಡಿಸದಿದ್ದರೆ ದೆಹಲಿಯ ವಾಯು ಗುಣಮಟ್ಟ ತೀರಾ ಕಳಪೆ ಮಟ್ಟದಲ್ಲೇ ಮುಂದುವರಿಯಲಿದೆ. ಆದರೆ ಸ್ವಲ್ಪ ಪಟಾಕಿ ಸಿಡಿಸಿದರೂ ವಾಯುಗುಣಮಟ್ಟ ತೀವ್ರ ಮಟ್ಟಕ್ಕೆ ಕುಸಿಯಲಿದೆ ಎಂದು ಎಸ್‌ಎಫ್‌ಎಎಫ್‌ಆರ್ ಯೋಜನಾ ನಿರ್ದೇಶಕ ಗುಫ್ರಾನ್ ಬೇಗ್ ಅಂದಾಜಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News