'ಪ್ರಚೋದನಕಾರಿ' ಪೋಸ್ಟ್‌: 71 ಮಂದಿ ವಿರುದ್ಧ ಐದು ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿದ ತ್ರಿಪುರಾ ಪೊಲೀಸರು

Update: 2021-11-03 08:28 GMT
ಸಾಂದರ್ಭಿಕ ಚಿತ್ರ, Photo: Indian Express

ಅಗರ್ತಲ: ಸಾಮಾಜಿಕ ಮಾಧ್ಯಮದಲ್ಲಿ ‘ಪ್ರಚೋದನಕಾರಿ’ ಹಾಗೂ  ‘ನಕಲಿ ಪೋಸ್ಟ್‌’ಗಳನ್ನು ಹಂಚಿಕೊಂಡ ಆರೋಪದಲ್ಲಿ 71 ಜನರ ವಿರುದ್ಧ ತ್ರಿಪುರಾ ಪೊಲೀಸರು ಬುಧವಾರ ಬೆಳಿಗ್ಗೆ ಐದು ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದು The Indian Express ವರದಿ ಮಾಡಿದೆ.

ಸುಳ್ಳು ಸುದ್ದಿ ಹಾಗೂ ವದಂತಿಗಳನ್ನು ಹರಡುವುದರಿಂದ ದೂರವಿರಲು ಜನರಿಗೆ ಮನವಿ ಮಾಡಿದ್ದು "ಸಮಾಜದಲ್ಲಿ ದ್ವೇಷವನ್ನು ಸೃಷ್ಟಿಸಲು" ಪ್ರಯತ್ನಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ ಎಂದು ತ್ರಿಪುರಾ ಪೊಲೀಸರು ಬುಧವಾರ ತಮ್ಮ ಅಧಿಕೃತ ಫೇಸ್‌ಬುಕ್ ಪುಟದಲ್ಲಿ ಪೋಸ್ಟ್ ಮಾಡಿದ್ದಾರೆ.

"ವದಂತಿಗಳನ್ನು ಹರಡುವ ಕಾರಣ ಪರಿಶೀಲನೆಯಿಲ್ಲದೆ ಪೋಸ್ಟ್ ಅನ್ನು ಹಂಚಿಕೊಳ್ಳದಂತೆ/ಲೈಕ್ ಮಾಡದಂತೆ ಎಲ್ಲರಿಗೂ ಮನವಿ ಮಾಡುತ್ತೇವೆ. ದಯವಿಟ್ಟು ನಕಲಿ ಚಿತ್ರಗಳು ಮತ್ತು ನಕಲಿ ಮಾಹಿತಿಯನ್ನು ಹರಡಬೇಡಿ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಸಾಮಾನ್ಯವಾಗಿದೆ’’ ಎಂದು ಪ್ರತ್ಯೇಕ ಫೇಸ್‌ಬುಕ್ ಪೋಸ್ಟ್‌ನಲ್ಲಿ ಪೊಲೀಸರು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.

ಇದಕ್ಕೂ ಮುನ್ನ ಅಕ್ಟೋಬರ್ 28 ರಂದು ಉತ್ತರ ತ್ರಿಪುರದ ಪಾಣಿಸಾಗರ್ ಉಪವಿಭಾಗದಲ್ಲಿರುವ ಮಸೀದಿ ಕೆಲವು ಅಂಗಡಿಗಳು ಮತ್ತು ಮನೆಗಳನ್ನು ಧ್ವಂಸಗೊಳಿಸಿದ ಎರಡು ದಿನಗಳ ನಂತರ ರಾಜ್ಯದಲ್ಲಿ ಕಾನೂನು ಹಾಗೂ  ಸುವ್ಯವಸ್ಥೆ 'ಸಾಮಾನ್ಯ'ವಾಗಿದೆ  ಎಂದು ರಾಜ್ಯ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಕೆಲವು ವ್ಯಕ್ತಿಗಳು ನಕಲಿ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳನ್ನು ಬಳಸಿಕೊಂಡು ತ್ರಿಪುರಾದಲ್ಲಿ ಸುಳ್ಳು ಸುದ್ದಿ ಮತ್ತು ವದಂತಿಗಳನ್ನು ಹರಡುತ್ತಿದ್ದಾರೆ ಎಂದು ಹೇಳಿದ್ದರು.

ಪಾಣಿಸಾಗರದಲ್ಲಿ ಮಸೀದಿ ಹೊತ್ತಿ ಉರಿಯುತ್ತಿರುವ ಚಿತ್ರಗಳು ನಕಲಿ ಎಂದು ಪೊಲೀಸರು ಹೇಳಿದ್ದಾರೆ.

“ಇದು ಬೇರೆ ದೇಶದಿಂದ ಬಂದಿರಬಹುದು. ಈ ನಕಲಿ ಚಿತ್ರಗಳನ್ನು ಯಾರು ಅಪ್‌ಲೋಡ್ ಮಾಡಿದ್ದಾರೆ ಎಂಬುದನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದೇವೆ’’ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News