ಜಾಮೀನು ಆದೇಶಗಳ ಸಂವಹನ ವಿಳಂಬವು ಕೈದಿಯ ಸ್ವಾತಂತ್ರ್ಯದ ಮೇಲೆ ಪರಿಣಾಮ ಬೀರುತ್ತದೆ: ನ್ಯಾ. ಡಿ.ವೈ. ಚಂದ್ರಚೂಡ್
ಹೊಸದಿಲ್ಲಿ: ಕಾನೂನು ಪ್ರಕ್ರಿಯೆಗಳ ಡಿಜಿಟಲೀಕರಣಕ್ಕೆ ಬುಧವಾರ ಒತ್ತು ನೀಡಿದ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶ ನ್ಯಾ.ಡಿ.ವೈ.ಚಂದ್ರಚೂಡ ಅವರು,ಜೈಲು ಅಧಿಕಾರಿಗಳಿಗೆ ಜಾಮೀನು ಆದೇಶಗಳನ್ನು ತಲುಪಿಸುವಲ್ಲಿ ವಿಳಂಬವು ಅತ್ಯಂತ ಗಂಭೀರ ಕೊರತೆಯಾಗಿದ್ದು,ಅದು ಪ್ರತಿಯೊಬ್ಬ ವಿಚಾರಣಾಧೀನ ಮತ್ತು ದೋಷಿ ಕೈದಿಯ ಸ್ವಾತಂತ್ರದ ಮೇಲೆ ಪ್ರತಿಕೂಲ ಪರಿಣಾಮವನ್ನುಂಟು ಮಾಡುತ್ತದೆ ಎಂದು ಹೇಳಿದರು.
ಅಲಹಾಬಾದ್ ಉಚ್ಚ ನ್ಯಾಯಾಲಯವು ಆಯೋಜಿಸಿದ್ದ ವರ್ಚುವಲ್ ನ್ಯಾಯಾಲಯಗಳು ಮತ್ತು ಇ-ಸೇವಾ ಕೇಂದ್ರಗಳ ಆನ್ಲೈನ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ನ್ಯಾ.ಚಂದ್ರಚೂಡ ಅವರು ಒಡಿಶಾ ಉಚ್ಚ ನ್ಯಾಯಾಲಯದಲ್ಲಿ ಮುಖ್ಯ ನ್ಯಾಯಾಧೀಶ ಎಸ್.ಮುರಳೀಧರ ಅವರು ಆರಂಭಿಸಿರುವ ‘ಇ-ಕಸ್ಟಡಿ ಸರ್ಟಿಫಿಕೇಟ್’ ಉಪಕ್ರಮವನ್ನು ಪ್ರಸ್ತಾಪಿಸಿ.‘ಈ ಪ್ರಮಾಣಪತ್ರವು ನಿರ್ದಿಷ್ಟ ವಿಚಾರಣಾಧೀನ ಅಥವಾ ದೋಷಿ ಕೈದಿಯ ಆರಂಭಿಕ ರಿಮಾಂಡ್ನಿಂದ ಹಿಡಿದು ಪ್ರತಿ ಪ್ರಕರಣದಲ್ಲಿನ ನಂತರದ ಪ್ರಗತಿಯವರೆಗಿನ ಎಲ್ಲ ಅಗತ್ಯ ಮಾಹಿತಿಗಳನ್ನು ನಮಗೆ ನೀಡುತ್ತದೆ. ಇದು ಜಾಮೀನು ಆದೇಶಗಳನ್ನು ಹೊರಡಿಸಿದ ನಂತರ ಅವುಗಳನ್ನು ತಕ್ಷಣ ಜಾರಿಗಾಗಿ ಜೈಲುಗಳಿಗೆ ತಲುಪಿಸಲಾಗುತ್ತದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ನಮಗೆ ನೆರವಾಗುತ್ತದೆ ’ಎಂದು ಹೇಳಿದರು.
ಇತ್ತೀಚಿಗೆ ಮಾದಕ ದ್ರವ್ಯ ಪ್ರಕರಣದಲ್ಲಿ ಬಾಲಿವುಡ್ ನಟ ಶಾರುಕ್ ಖಾನ್ ಅವರ ಪುತ್ರ ಆರ್ಯನ್ ಖಾನ್ಗೆ ಬಾಂಬೆ ಉಚ್ಚ ನ್ಯಾಯಾಲಯವು ಜಾಮೀನು ನೀಡಿದ್ದರೂ ಅದು ಸಕಾಲದಲ್ಲಿ ಆರ್ಥರ್ ರೋಡ್ ಜೈಲಿನ ಹೊರಗಡೆಯಿರುವ ಜಾಮೀನು ಪೆಟ್ಟಿಗೆಯನ್ನು ಸೇರದಿದ್ದರಿಂದ ಅವರು ಒಂದು ಹೆಚ್ಚುವರಿ ದಿನವನ್ನು ಜೈಲಿನಲ್ಲಿ ಕಳೆಯುವಂತಾಗಿತ್ತು.
ಪರಿಹಾರ ವ್ಯವಸ್ಥೆಯ ಅಗತ್ಯವನ್ನು ಪ್ರಮುಖವಾಗಿ ಬಿಂಬಿಸಿದ ನ್ಯಾ.ಚಂದ್ರಚೂಡ,ಕ್ರಿಮಿನಲ್ ನ್ಯಾಯ ವ್ಯವಸ್ಥೆಯಲ್ಲಿನ ಒಂದು ಅತ್ಯಂತ ಗಂಭೀರ ಕೊರತೆಯೆಂದರೆ ಜಾಮೀನು ಆದೇಶಗಳ ಸಂವಹನದಲ್ಲಿಯ ವಿಳಂಬವಾಗಿದೆ ಮತ್ತು ಈ ಸಮಸ್ಯೆಯನ್ನು ನಾವು ಸಮರೋಪಾದಿಯಲ್ಲಿ ಬಗೆಹರಿಸಬೇಕಿದೆ. ಏಕೆಂದರೆ ಈ ವಿಳಂಬವು ಪ್ರತಿಯೊಬ್ಬ ವಿಚಾರಣಾಧೀನ ಕೈದಿಯ ಅಥವಾ ಶಿಕ್ಷೆಯನ್ನು ಅಮಾನತಿನಲ್ಲಿರಿಸಲಾಗಿರುವ ದೋಷಿ ಕೈದಿಯ ಮಾನವ ಸ್ವಾತಂತ್ರದ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ ಎಂದರು.
ಈ ವರ್ಷದ ಪೂರ್ವಾರ್ಧದಲ್ಲಿ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದ್ದರೂ ಆಗ್ರಾ ಸೆಂಟ್ರಲ್ ಜೈಲಿನಿಂದ 13 ಕೈದಿಗಳ ಬಿಡುಗಡೆಯಲ್ಲಿ ವಿಳಂಬವನ್ನು ಸ್ವಯಂಪ್ರೇರಿತವಾಗಿ ಗಮನಕ್ಕೆ ತೆಗೆದುಕೊಂಡಿದ್ದ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ಸರ್ವೋಚ್ಚ ನ್ಯಾಯಾಲಯದ ಪೀಠವು ಜೈಲು ಅಧಿಕಾರಿಗಳಿಗೆ ತನ್ನ ತೀರ್ಪುಗಳ ತ್ವರಿತ ಮತ್ತು ಸುರಕ್ಷಿತ ವಿದ್ಯುನ್ಮಾನ ರವಾನೆಗಾಗಿ ವ್ಯವಸ್ಥೆಯೊಂದನ್ನು ರೂಪಿಸುವ ಯೋಜನೆಯನ್ನು ಪ್ರಕಟಿಸಿತ್ತು. ಸೆಪ್ಟಂಬರ್ನಲ್ಲಿ ಇದಕ್ಕಾಗಿ ‘ಫಾಸ್ಟರ್’ ವ್ಯವಸ್ಥೆಯ ಅನುಷ್ಠಾನಕ್ಕಾಗಿ ಸರ್ವೋಚ್ಚ ನ್ಯಾಯಾಲಯವು ಹಸಿರು ನಿಶಾನೆಯನ್ನು ನೀಡಿತ್ತು.
ಬುಧವಾರದ ಕಾರ್ಯಕ್ರಮದಲ್ಲಿ ಇ-ಸೇವಾ ಕೇಂದ್ರಗಳ ಮಹತ್ವದ ಬಗ್ಗೆಯೂ ಮಾತನಾಡಿದ ನ್ಯಾ.ಚಂದ್ರಚೂಡ ಅವರು,‘ಭಾರತದಲ್ಲಿನ ಡಿಜಿಟಲ್ ವಿಭಜನೆಯಿಂದಾಗಿ ಇ-ಸೇವಾ ಕೇಂದ್ರಗಳು ನಮಗೆ ಅಗತ್ಯವಾಗಿವೆ. ನಮ್ಮ ಗ್ರಾಮೀಣ ಪ್ರದೇಶಗಳಲ್ಲಿ ಸ್ಮಾರ್ಟ್ ಫೋನ್ಗಳ ಬಳಕೆ ಹೆಚ್ಚುತ್ತಿದ್ದರೂ ಈಗಲೂ ಹೆಚ್ಚಿನ ಜನರಿಗೆ ವೈಯಕ್ತಿಕವಾಗಿ ಕಂಪ್ಯೂಟರ್ ಸೌಲಭ್ಯ ಲಭ್ಯವಿಲ್ಲ’ ಎಂದರು.
ವರ್ಚುವಲ್ ನ್ಯಾಯಾಲಯಗಳೂ ಅಷ್ಟೇ ಮುಖ್ಯವಾಗಿವೆ ಎಂದ ಅವರು,ಟ್ರಾಫಿಕ್ ಚಲನ್ಗಳ ನ್ಯಾಯನಿರ್ಣಯಕ್ಕಾಗಿ 12 ರಾಜ್ಯಗಳಲ್ಲಿ ವರ್ಚುವಲ್ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದೆ ಎಂದು ಬೆಟ್ಟು ಮಾಡಿದರು.
ಜಿಲ್ಲಾ ನ್ಯಾಯಾಲಯಗಳಲ್ಲಿ ಸುಮಾರು ಮೂರು ಕೋಟಿ ಕ್ರಿಮಿನಲ್ ಪ್ರಕರಣಗಳು ಬಾಕಿಯಿವೆ ಎಂದು ಬೆಟ್ಟು ಮಾಡಿದ ನ್ಯಾ.ಚಂದ್ರಚೂಡ,ಭಾರೀ ಸಂಖ್ಯೆಯಲ್ಲಿ ಬಾಕಿ ಪ್ರಕರಣಗಳ ಸಮಸ್ಯೆಯನ್ನು ಬಗೆಹರಿಸಲು ಮಾಹಿತಿ ಮತ್ತು ತಂತ್ರಜ್ಞಾನ ವ್ಯವಸ್ಥೆಯ ಅಳವಡಿಕೆಗೆ ಒತ್ತು ನೀಡಿದರು.