×
Ad

ಚುನಾವಣೆ ನಡೆಯುವ ಐದು ರಾಜ್ಯ ಸೇರಿ ಎಂಟು ಕಡೆ ಪೆಟ್ರೋಲ್ ಮೇಲಿನ ವ್ಯಾಟ್ ಕಡಿತ!

Update: 2021-11-04 10:08 IST

ಹೊಸದಿಲ್ಲಿ, ನ.4: ಕೇಂದ್ರ ಸರಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕ್ರಮವಾಗಿ ಐದು ಹಾಗೂ ಹತ್ತು ರೂಪಾಯಿಗಳಷ್ಟು ಕಡಿತಗೊಳಿಸಿದ ಬೆನ್ನಲ್ಲೇ, ಮುಂದಿನ ವರ್ಷದ ಆರಂಭದಲ್ಲಿ ಚುನಾವಣೆ ನಡೆಯುವ ಐದು ರಾಜ್ಯಗಳು ಸೇರಿದಂತೆ ಎನ್‌ಡಿಎ ಆಡಳಿತದ ಎಂಟು ರಾಜ್ಯಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಕಡಿತಗೊಳಿಸಲಾಗಿದೆ.

ಮುಂಬೈನಲ್ಲಿ ತೆರಿಗೆ ಕಡಿತದ ಬಳಿಕ ಪೆಟ್ರೋಲ್ ದರ ಲೀಟರ್‌ಗೆ 6 ರೂ. ಹಾಗೂ ಡೀಸೆಲ್ ಬೆಲೆ 12 ರೂಪಾಯಿನಷ್ಟು ಕಡಿಮೆಯಾಗಲಿದೆ. ಆಯಾ ರಾಜ್ಯಗಳಲ್ಲಿ ವಿಧಿಸಲಾಗುವ ವ್ಯಾಟ್ ಹಂತದ ಆಧಾರದಲ್ಲಿ ರಾಜ್ಯಗಳಲ್ಲಿ ಬೆಲೆ ಬದಲಾಗಲಿದೆ.

ಕೇಂದ್ರದ ನಿರ್ಧಾರದ ಬೆನ್ನಲ್ಲೇ ಉತ್ತರ ಪ್ರದೇಶ, ಗುಜರಾತ್, ಗೋವಾ, ಕರ್ನಾಟಕ, ಉತ್ತರಾಖಂಡ, ಅಸ್ಸಾಂ, ಮಣಿಪುರ, ತ್ರಿಪುರ ಹಾಗೂ ಬಿಹಾರ ಇಂಧನ ಮೇಲಿನ ವ್ಯಾಟ್ ಕಡಿತಗೊಳಿಸಿವೆ. ಈ ಎಲ್ಲವೂ ಬಿಜೆಪಿ ಆಡಳಿತದ ರಾಜ್ಯಗಳಾಗಿದ್ದು, ಬಿಹಾರದಲ್ಲಿ ಮಾತ್ರ ಜೆಡಿಯು ಜತೆಗಿನ ಮೈತ್ರಿ ಸರಕಾರವಾಗಿದೆ. ಈ ಪೈಕಿ ಉತ್ತರ ಪ್ರದೇಶ, ಗೋವಾ, ಉತ್ತರಾಖಂಡ, ಗುಜರಾತ್ ಹಾಗೂ ಮಣಿಪುರದಲ್ಲಿ ಮುಂದಿನ ವರ್ಷದ ಆರಂಭದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಸರಕಾರ ಅಬಕಾರಿ ಸುಂಕ ಕಡಿತಗೊಳಿಸಿರುವುದರಿಂದ ಪ್ರಸಕ್ತ ಹಣಕಾಸು ವರ್ಷದ ಉಳಿದ ಭಾಗದಲ್ಲಿ ಸರಕಾರದ ಬೊಕ್ಕಸಕ್ಕೆ ನಿರೀಕ್ಷಿತ ಆದಾಯದಲ್ಲಿ 60,000-65,000 ಕೋಟಿ ರೂ. ಖೋತಾ ಆಗಲಿದೆ.

ಕೃಷಿ ಮತ್ತು ಸಾಗಣೆ ಕ್ಷೇತ್ರಕ್ಕೆ ಬಳಕೆಯಾಗುವ ಡಿಸೆಲ್ ಮೇಲೆ ಹೆಚ್ಚು ತೆರಿಗೆ ಕಡಿತಗೊಳಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ. ಇದು ಮುಂಬರುವ ಹಿಂಗಾರು ಹಂಗಾಮಿಗೆ ರೈತರಿಗೆ ನೆರವಾಗಲಿದೆ ಎಂದು ಸ್ಪಷ್ಟಪಡಿಸಿದೆ. ಗ್ರಾಹಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯಗಳು ಕೂಡಾ ವ್ಯಾಟ್ ಕಡಿತಗೊಳಿಸುವಂತೆ ಕೇಂದ್ರ ಸರಕಾರ ಸಲಹೆ ಮಾಡಿದೆ.

ಆದರೆ ಕೋವಿಡ್-19 ಪೂರ್ವ ಮಟ್ಟಕ್ಕೆ ತೆರಿಗೆ ಇಳಿಸದ ಕೇಂದ್ರ ಸರಕಾರದ ಕ್ರಮವನ್ನು ಕಾಂಗ್ರೆಸ್ ಹಾಗೂ ಟಿಎಂಸಿ ಸೇರಿದಂತೆ ವಿರೋಧ ಪಕ್ಷಗಳು ಟೀಕಿಸಿವೆ. ಕಳೆದ ವರ್ಷದ ಮಾರ್ಚ್ ಮತ್ತು ಮೇ ತಿಂಗಳ ನಡುವೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬ್ಕಾರಿ ಸುಂಕವನ್ನು ರೂ. 13 ಹಾಗೂ 16ರಷ್ಟು ಹೆಚ್ಚಿಸಲಾಗಿತ್ತು. ಎರಡು ಬಾರಿಯ ಏರಿಕೆಯಿಂದಾಗಿ ಪೆಟ್ರೋಲ್ ಮೇಲಿನ ಅಬ್ಕಾರಿ ಸುಂಕ ಶೇಕಡ 65ರಷ್ಟು ಹೆಚ್ಚಿ ರೂ. 19.98ರಿಂದ 32.98 ಆಗಿತ್ತು ಹಾಗೂ ಡೀಸೆಲ್ ಮೇಲಿನ ಸುಂಕ ಶೇಕಡ 79ರಷ್ಟು ಹೆಚ್ಚಳವಾಗಿ 15.83 ರೂಪಾಯಿಗಳಿಂದ 28.35 ರೂಪಾಯಿ ಆಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News