×
Ad

ಕೇಂದ್ರ ಸರಕಾರಿ ನೌಕರರಿಗೆ ಇನ್ನು ಕೆಲಸದ ವೇಳೆ 'ಯೋಗ ವಿರಾಮ'

Update: 2021-11-04 10:56 IST

ಹೊಸದಿಲ್ಲಿ, ನ.4: ಉದ್ಯೋಗಿಗಳ ಉತ್ಪಾದಕತೆಯನ್ನು ಹೆಚ್ಚಿಸುವ ಪ್ರಯತ್ನವಾಗಿ ಕೇಂದ್ರ ಸರಕಾರಿ ನೌಕರರಿಗೆ ಕಚೇರಿ ಅವಧಿಯಲ್ಲಿ ಯೋಗ ವಿರಾಮವನ್ನು ಜಾರಿಗೊಳಿಸಲಾಗಿದೆ.

ಕೆಲ ಸಮಯ ವಿರಾಮ ಪಡೆದು ಸರಳ ವ್ಯಾಯಾಮ ಮಾಡುವ ಮೂಲಕ ಉದ್ಯೋಗಿಗಳು ಪುನಶ್ಚೇತನಗೊಳ್ಳಲು ಈ ಕ್ರಮ ಅನುವು ಮಾಡಿಕೊಡಲಿದೆ. ಇದು ಅವರ ಉತ್ಪಾದಕತೆಯನ್ನು ಹೆಚ್ಚಿಸಲು ನೆರವಾಗಲಿದೆ ಎಂದು ಕೇಂದ್ರ ಸರ್ಕಾರದ ಅಧಿಕಾರಿಗಳ ಹೇಳಿಕೆಯನ್ನು ಉಲ್ಲೇಖಿಸಿ 'ಲೈವ್‌ ಹಿಂದೂಸ್ತಾನ್' ವರದಿ ಮಾಡಿದೆ.

ಆಯುಷ್ ಸಚಿವಾಲಯ ಈ ಸಂಬಂಧ ಎಲ್ಲ ಸಚಿವಾಲಯಗಳಿಗೆ ಸೂಚನೆ ನೀಡಿ, ಉದ್ಯೋಗಿಗಳು ಯೋಗ ವಿರಾಮ ಪಡೆದುಕೊಳ್ಳಲು ಉತ್ತೇಜಿಸಬೇಕು ಎಂದು ಹೇಳಿದೆ. ಇದಕ್ಕೆ ಅನುಗುಣವಾಗಿ ರಸ್ತೆ ಮತ್ತು ಸಾರಿಗೆ ಸಚಿವಾಲಯ, ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಮತ್ತು ರಾಷ್ಟ್ರೀಯ ಹೆದ್ದಾರಿ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ನಿಗಮ (ಎನ್‌ಎಚ್‌ಐಡಿಸಿ) ಸಿಬ್ಬಂದಿಗೆ ನವೆಂಬರ್ 2ರಿಂದ ಇದನ್ನು ಜಾರಿಗೊಳಿಸಿದೆ.

ದೇಶದ ಆರು ಮುಖ್ಯ ನಗರಗಳಲ್ಲಿ ಜನವರಿ 1ರಿಂದ ಪ್ರಾಯೋಗಿಕವಾಗಿ ಇದನ್ನು ಜಾರಿಗೆ ತರಲಾಗಿತ್ತು. ಇದರಲ್ಲಿ ಐದು ನಿಮಿಷಗಳ ಯೋಗ ವಿರಾಮ ನೀಡಲಾಗಿತ್ತು. ಇದು ಕೆಲಸದ ಸಂಬಂಧಿ ಒತ್ತಡ ನಿವಾರಿಸಿ ಹೊಸತನದ ಅನುಭವ ಪಡೆಯಲು ಉದ್ಯೋಗಿಗಳಿಗೆ ನೆರವಾಗಲಿದೆ ಎಂದು ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ. 15 ದಿನಗಳ ಪ್ರಯೋಗವನ್ನು ಆರು ಯೋಗ ಸಂಸ್ಥೆಗಳ ಸಹಯೋಗದಲ್ಲಿ ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆಯಲ್ಲಿ ನಿರ್ವಹಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News