×
Ad

'ಆತಂಕವಾದಿ' ಎಂದು ಬರೆದು ಬೆನ್ನಿಗೆ ಬರೆ ಹಾಕಿದ ಜೈಲಿನ ಅಧೀಕ್ಷಕ: ವಿಚಾರಣಾಧೀನ ಕೈದಿಯ ಆರೋಪ

Update: 2021-11-04 17:12 IST
Photo: Twitter/Manjinder singh sirsa

 ಚಂಡೀಗಢ: ಪಂಜಾಬ್ ರಾಜ್ಯದ ಬರ್ನಾಲ ಜಿಲ್ಲೆಯಲ್ಲಿನ ಕಾರಾಗೃಹದಲ್ಲಿರುವ ವಿಚರಣಾಧೀನ ಕೈದಿಗೆ ಅಲ್ಲಿನ ಅಧೀಕ್ಷಕರು  ಹಿಂಸೆ ನೀಡಿ ಆತನ ಬೆನ್ನಿನಲ್ಲಿ ಆತಂಕವಾದಿ ಎಂದು ಬರೆದು ಬರೆ ಹಾಕಿಸಿದ ಅಮಾನವೀಯ ಘಟನೆ ನಡೆದಿದ್ದು ಘಟನೆಯ ತನಿಖೆಗೆ ಉಪಮುಖ್ಯಮಂತ್ರಿ ಸುಖ್‍ಜಿಂದರ್ ಸಿಂಗ್ ರಂಧಾವ ಆದೇಶಿಸಿದ್ದಾರೆ.

ತನಗಾದ ಹಿಂಸೆಯ ಕುರಿತಂತೆ 28 ವರ್ಷದ ಕೈದಿ ಕರಂಜೀತ್ ಸಿಂಗ್ ಎಂಬಾತ ಮಾನ್ಸಾ ಜಿಲ್ಲಾ ನ್ಯಾಯಾಲಯದಲ್ಲಿ ಹೇಳಿಕೊಂಡಿದ್ದಾನೆ. ಡ್ರಗ್ಸ್ ಪ್ರಕರಣದಲ್ಲಿ ಆತನ ವಿರುದ್ಧ ಎನ್ ಡಿಪಿಎಸ್ ಕಾಯಿದೆಯಡಿ ಪ್ರಕರಣ ದಾಖಲಾಗಿದೆ.

"ಜೈಲಿನಲ್ಲಿರುವ ಪರಿಸ್ಥಿತಿ ಹೀನಾಯಕರವಾಗಿದೆ. ಏಡ್ಸ್ ಮತ್ತು ಹೆಪಾಟಿಟಿಸ್‍ನಿಂದ ಬಳಲುತ್ತಿರುವವರನ್ನು ಪ್ರತ್ಯೇಕ ವಾರ್ಡುಗಳಲ್ಲಿರಿಸಲಾಗಿಲ್ಲ. ಈ ವಿಚಾರವನ್ನು ನಾನು ಎತ್ತಿದಾಗಲೆಲ್ಲಾ ಅಧೀಕ್ಷಕರು ನನಗೆ ಹಲ್ಲೆಗೈಯ್ಯುತ್ತಿದ್ದಾರೆ" ಎಂದು ಆತ ಆರೋಪಿಸಿದ್ದಾನೆ.

ಆದರೆ ಆತನ ಆರೋಪವನ್ನು ಜೈಲ್ ಅಧೀಕ್ಷಕ ಬಲಬೀರ್ ಸಿಂಗ್ ನಿರಾಕರಿಸಿದ್ದಾರೆ ಹಾಗೂ ಆತನಿಗೆ ಸುಳ್ಳು ಸುದ್ದಿಗಳನ್ನು ಹರಡುವ ಅಭ್ಯಾಸವಿದೆ ಎಂದಿದ್ದಾರೆ. "ಆತನ ವಿರುದ್ಧ ಎನ್‍ಡಿಪಿಎಸ್ ಕಾಯಿದೆಯಡಿ ಪ್ರಕರಣ ಸಹಿತ ಕೊಲೆ ಪ್ರಕರಣ ಸೇರಿದಂತೆ 11 ಪ್ರಕರಣಗಳಿವೆ, ಆತ ನಮಗೆ ಸಮಸ್ಯೆ ಸೃಷ್ಟಿಸಲು ಆರೋಪಿಸುತ್ತಿದ್ದಾನೆ. ಆತ ಸಂಗ್ರೂರ್ ಕಾರಾಗೃಹದಲ್ಲಿದ್ದಾಗ ಕಳೆದ ಬಾರಿ ಆತನ ಬ್ಯಾರಾಕ್ ಶೋಧಿಸಿದಾಗ ಅಲ್ಲಿ ಸೆಲ್ ಫೋನ್ ದೊರಕಿತ್ತು, ಆತ ಒಮ್ಮೆ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಕೂಡ ಯತ್ನಿಸಿದ್ದ" ಎಂದು ಅವರು ಆರೋಪಿಸಿದ್ದಾರೆ.

ಘಟನೆ ಕುರಿತು ಕೂಲಂಕಷ ತನಿಖೆ ನಡೆಸಿ ಕೈದಿಯ ವೈದ್ಯಕೀಯ ತಪಾಸಣೆ ನಡೆಸಬೇಕು ಎಂದು ಎಡಿಜಿಪಿ (ಬಂದೀಖಾನೆ) ಪಿ ಕೆ ಸಿನ್ಹಾ ಅವರಿಗೆ ಉಪಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ. ತನಿಖಾಧಿಕಾರಿಯಾಗಿ  ಹಿರಿಯ ಅಧಿಕಾರಿ ತಜೀಂದರ್ ಸಿಂಗ್ ಮೌರ್ ಅವರನ್ನು ನೇಮಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News