2020ರಲ್ಲಿ ಆತ್ಮಹತ್ಯೆ ಮಾಡಿಕೊಂಡ ಪ್ರತಿ ಹತ್ತು ಜನರಲ್ಲಿ ಆರು ಜನರ ವಾರ್ಷಿಕ ಆದಾಯ ಒಂದು ಲ.ರೂ.ಗೂ ಕಡಿಮೆಯಿತ್ತು

Update: 2021-11-04 14:48 GMT

ಹೊಸದಿಲ್ಲಿ, ನ. 4: ಕಳೆದ ವರ್ಷ ಆತ್ಮಹತ್ಯೆ ಮಾಡಿಕೊಂಡವರ ಪೈಕಿ ಶೇ.63ರಷ್ಟು ಅಥವಾ ಪ್ರತಿ 10ರಲ್ಲಿ ಆರು ಜನರು ಒಂದು ಲ.ರೂ.ಗೂ ಕಡಿಮೆ ವಾರ್ಷಿಕ ಆದಾಯವನ್ನು ಹೊಂದಿದ್ದರು ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಘಟಕ (ಎನ್ ಸಿಆರ್ ಬಿ)ದ ಅಂಕಿಅಂಶಗಳು ತೋರಿಸಿವೆ.

ಕೋವಿಡ್ ಪಿಡುಗಿಗೆ ತುತ್ತಾಗಿದ್ದ 2020ರಲ್ಲಿ ದೇಶದಲ್ಲಿ ಒಟ್ಟು 1,53,052 ಆತ್ಮಹತ್ಯೆ ಪ್ರಕರಣಗಳು ವರದಿಯಾಗಿದ್ದು,2019ಕ್ಕೆ ಹೋಲಿಸಿದರೆ ಶೇ.10ರಷ್ಟು ಏರಿಕೆಯಾಗಿದೆ. ಶೇ.32ರಷ್ಟು ಪ್ರಕರಣಗಳಲ್ಲಿ ಅಥವಾ 49,270 ಜನರು ಒಂದು ಲ.ರೂ. ಮತ್ತು ಐದು ಲ.ರೂ.ವಾರ್ಷಿಕ ಆದಾಯವನ್ನು ಹೊಂದಿದ್ದ ಗುಂಪಿಗೆ ಸೇರಿದ್ದರು.

ವೃತ್ತಿಗೆ ಸಂಬಂಧಿಸಿದಂತೆ ಹೇಳುವುದಾದರೆ ಆತ್ಮಹತ್ಯೆ ಮಾಡಿಕೊಂಡವರಲ್ಲಿ 37,666 (ಶೇ.24.6)ಜನರು ದಿನಗೂಲಿ ಕಾರ್ಮಿಕರಾಗಿದ್ದರು. 22,374 (ಶೇ.14.6)ಗೃಹಿಣಿಯರು ಆತ್ಮಹತ್ಯೆಗೆ ಶರಣಾಗಿದ್ದರು. ನಂತರದ ಸ್ಥಾನಗಳಲ್ಲಿ ಸ್ವೋದ್ಯೋಗಿಗಳು (ಶೇ.11.3) ಮತ್ತು ವೃತ್ತಿಪರರು/ವೇತನದಾರ ವರ್ಗದವರು (ಶೇ.9.7) ಇದ್ದಾರೆ.

ಕಳೆದ ವರ್ಷ ಆತ್ಮಹತ್ಯೆ ಮಾಡಿಕೊಂಡವರಲ್ಲಿ 10,677 (ಶೇ.7) ಜನರು ಕೃಷಿಕ್ಷೇತ್ರದಲ್ಲಿ ತೊಡಗಿಕೊಂಡಿದ್ದರು. ಈ ಪೈಕಿ 5,579 ಕೃಷಿಕರು ಮತ್ತು 5,098 ಕೃಷಿ ಕಾರ್ಮಿಕರು ಸೇರಿದ್ದಾರೆ.

ಕೌಟುಂಬಿಕ ಸಮಸ್ಯೆಗಳು (ಶೇ.33.6) ಮತ್ತು ಅನಾರೋಗ್ಯ (ಶೇ.18) ಆತ್ಮಹತ್ಯೆಗೆ ಪ್ರಮುಖ ಕಾರಣಗಳಾಗಿದ್ದವು. ಮಾದಕ ದ್ರವ್ಯ ವ್ಯಸನ (ಶೇ.6), ವಿವಾಹ ಸಂಬಂಧಿ ಸಮಸ್ಯೆಗಳು (ಶೇ.5),ಪ್ರೇಮ ವ್ಯವಹಾರಗಳು (ಶೇ.4.4),ದಿವಾಳಿತನ ಅಥವಾ ಸಾಲ (ಶೇ.3.4),ನಿರುದ್ಯೋಗ (ಶೇ.2.3),ಪರೀಕ್ಷೆಯಲ್ಲಿ ವೈಫಲ್ಯ (ಶೇ.1.4),ವೃತ್ತಿ ಸಮಸ್ಯೆ (ಶೇ.1.2) ಮತ್ತು ಬಡತನ (ಶೇ.1.2) ಇವು ಆತ್ಮಹತ್ಯೆಗೆ ಇತರ ಕಾರಣಗಳಾಗಿವೆ ಎಂದು ಎನ್ಸಿಆರ್ಬಿ ತನ್ನ ವರದಿಯಲ್ಲಿ ಹೇಳಿದೆ.

ಅತ್ಯಧಿಕ ಆತ್ಮಹತ್ಯೆಗಳು ಮಹಾರಾಷ್ಟ್ರ (19,909)ದಲ್ಲಿ ಸಂಭವಿಸಿದ್ದರೆ,ನಂತರದ ಸ್ಥಾನಗಳಲ್ಲಿ ತಮಿಳುನಾಡು (16,883), ಮಧ್ಯಪ್ರದೇಶ (14,578),ಪ.ಬಂಗಾಳ (13,103) ಮತ್ತು ಕರ್ನಾಟಕ(12,259) ಇವೆ. ದೇಶದಲ್ಲಿಯ ಒಟ್ಟು ಆತ್ಮಹತ್ಯೆಗಳ ಪೈಕಿ ಶೇ.50ರಷ್ಟು ಈ ಐದು ರಾಜ್ಯಗಳಲ್ಲಿಯೇ ಸಂಭವಿಸಿವೆ.

ಕಳೆದ ವರ್ಷ ದೇಶದಲ್ಲಿ ಆತ್ಮಹತ್ಯೆ ದರ (ಪ್ರತಿ ಒಂದು ಲಕ್ಷ ಜನಸಂಖ್ಯೆಗೆ ಆತ್ಮಹತ್ಯೆಗಳ ಸಂಖ್ಯೆ) 11.3 ಆಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News