ಬಿಹಾರದಲ್ಲಿ ವಿಷಪೂರಿತ ಸಾರಾಯಿ ಸೇವಿಸಿ ಕನಿಷ್ಠ 15 ಜನರ ಸಾವು
ಪಾಟ್ನಾ,ನ.4: ಬಿಹಾರದ ಪಶ್ಚಿಮ ಚಂಪಾರಣ್ ಮತ್ತು ಗೋಪಾಲಗಂಜ್ ಜಿಲ್ಲೆಗಳಲ್ಲಿ ವಿಷಪೂರಿತ ಸಾರಾಯಿ ಸೇವನೆಯ ಬಳಿಕ ಕನಿಷ್ಠ 15 ಜನರು ಮೃತಪಟ್ಟಿದ್ದಾರೆ. ಬಿಹಾರದಲ್ಲಿ 2016ರಿಂದ ಪಾನನಿಷೇಧ ಜಾರಿಯಲ್ಲಿದೆ.
ಗುರುವಾರ ಪಶ್ಚಿಮ ಚಂಪಾರಣ್ ಜಿಲ್ಲೆಯಲ್ಲಿ ಆರು ಜನರು ಮೃತಪಟ್ಟಿರುವುದನ್ನು ಖಚಿತ ಪಡಿಸಿದ ಎಸ್‌ಪಿ ಉಪೇಂದ್ರನಾಥ ವರ್ಮಾ ಅವರು,ವಿಷಪೂರಿತ ಸಾರಾಯಿ ಸೇವನೆಯಿಂದ ಈ ಸಾವುಗಳು ಸಂಭವಿಸಿರುವಂತೆ ಮೇಲ್ನೋಟಕ್ಕೆ ಕಂಡುಬರುತ್ತಿದೆ. ಆದಾಗ್ಯೂ ಸಾವಿಗೆ ನಿಖರ ಕಾರಣವು ಮರಣೋತ್ತರ ಪರೀಕ್ಷೆ ವರದಿಗಳ ಬಳಿಕವೇ ಗೊತ್ತಾಗಬೇಕಿದೆ. ಸಾರಾಯಿ ಸೇವನೆಯಿಂದ ಇತರ 15 ಜನರು ಅಸ್ಪಸ್ಥರಾಗಿದ್ದು,ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.
ತೇಲುವಾ ಗ್ರಾಮದ ಈ ನತದೃಷ್ಟರು ಬುಧವಾರ ಸಾರಾಯಿ ಸೇವಿಸಿದ್ದರು. ಅತ್ತ ಗೋಪಾಲಗಂಜ್ ಜಿಲ್ಲೆಯಲ್ಲಿ ಮಂಗಳವಾರದಿಂದ ಒಂಬತ್ತು ಜನರು ವಿಷಪೂರಿತ ಸಾರಾಯಿ ಸೇವನೆಯಿಂದ ಸಾವನ್ನಪ್ಪಿರುವುದನ್ನು ಜಿಲ್ಲಾಧಿಕಾರಿ ಎನ್.ಕೆ.ಚೌಧರಿ ದೃಢಪಡಿಸಿದ್ದಾರೆ. ಈ ಪೈಕಿ ನಾಲ್ಕು ಸಾವುಗಳು ಗುರುವಾರ ಸಂಭವಿಸಿವೆ. ಈ ಪೈಕಿ ಸಾರಾಯಿಯನ್ನು ಮಾರಾಟ ಮಾಡಿದ್ದ ವ್ಯಾಪಾರಿಯೂ ಸೇರಿದ್ದಾನೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಿರುವ ಪೊಲೀಸರು ಇಬ್ಬರು ಮೃತರ ಮನೆಗಳಿಂದ ಕಳ್ಳಭಟ್ಟಿ ಸಾರಾಯಿಯ ಒಟ್ಟು 30 ಪ್ಯಾಕೆಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಅಸ್ವಸ್ಥಗೊಂಡಿರುವ ನಾಲ್ವರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಗೋಪಾಲಗಂಜ್‌ನಲ್ಲಿ ಇದು ಎರಡನೇ ದೊಡ್ಡ ಅಕ್ರಮ ಮದ್ಯ ದುರಂತವಾಗಿದೆ. 2016ರಲ್ಲಿ ವಿಷಪೂರಿತ ಕಳ್ಳಭಟ್ಟಿ ಸಾರಾಯಿ ಸೇವನೆಯಿಂದ 21 ಜನರು ಮೃತಪಟ್ಟಿದ್ದರು. ಈ ಪ್ರಕರಣದಲ್ಲಿ ಒಂಭತ್ತು ಜನರಿಗೆ ಮರಣದಂಡನೆ ಮತ್ತು ಐವರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗಿತ್ತು.