ತಮಿಳುನಾಡು: ನೀಟ್ ನಲ್ಲಿ ಕಡಿಮೆ ಅಂಕ; ವೈದ್ಯಕೀಯ ಕೋರ್ಸ್ ಆಕಾಂಕ್ಷಿ ಆತ್ಮಹತ್ಯೆ
ಸೇಲಂ, ನ. 6: ರಾಷ್ಟ್ರೀಯ ಅರ್ಹತಾ ಹಾಗೂ ಪ್ರವೇಶ ಪರೀಕ್ಷೆ (ನೀಟ್)ಯಲ್ಲಿ ಕಡಿಮೆ ಅಂಕ ಗಳಿಸಿರುವುದರಿಂದ ಖಿನ್ನತೆಗೆ ಒಳಗಾದ 20 ವರ್ಷದ ವೈದ್ಯಕೀಯ ಕೋರ್ಸ್ ನ ಆಕಾಂಕ್ಷಿ ಆತ್ಮಹತ್ಯೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವಡಗುಮರೈಯ ನಿವಾಸಿ ಸುಭಾಶ್ಚಂದ್ರ ಬೋಸ್ ನೀಟ್ ಪರೀಕ್ಷೆಗೆ ಹಾಜರಾಗಿದ್ದರು. ನಾಲ್ಕು ದಿನಗಳ ಹಿಂದೆ ಫಲಿತಾಂಶ ಘೋಷಣೆಯಾಗಿತ್ತು. ಆದರೆ, ಅವರು ಕಡಿಮೆ ಅಂಕ ಗಳಿಸಿದ್ದರು. ಇದರಿಂದ ಖಿನ್ನರಾದ ಭೋಸ್ ನವೆಂಬರ್ 2ರಂದು ಕೀಟನಾಶ ಸೇವಿಸಿದ್ದರು. ಬೆಡ್ ನಲ್ಲಿ ಹೊರಳಾಡುತ್ತಿದ್ದ ಬೋಸ್ ನನ್ನು ಗಮನಸಿದ ಹೆತ್ತವರು ಕೂಡಲೇ ಅತ್ತೂರ್ನ ಸರಕಾರಿ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿನ ವೈದ್ಯರು ಮುಂದಿನ ಚಿಕಿತ್ಸೆಗೆ ಸೇಲಂನ ಖಾಸಗಿ ಆಸ್ಪತ್ರೆಗೆ ಶಿಫಾರಸು ಮಾಡಿದರು. ಆದರೆ, ಭೋಸ್ ಶನಿವಾರ ಬೆಳಗ್ಗೆ 3.30ಕ್ಕೆ ಮೃತಪಟ್ಟಿದ್ದಾರೆ. ನೀಟ್ ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸಿದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಈಗಾಗಲೇ ಹಲವು ವೈದ್ಯಕೀಯ ಆಕಾಂಕ್ಷಿಗಳು ಆತ್ಮಹತ್ಯೆಗೆ ಶರಣಾಗಿರುವುದು ವರದಿಯಾಗಿದೆ.