ಜೈಭೀಮ್‌ ಸಿನಿಮಾದಲ್ಲಿ ʼಹಿಂದಿ ಮಾತನಾಡಿದ್ದಕ್ಕೆ ಕಪಾಳಮೋಕ್ಷʼ: ಪ್ರಕಾಶ್‌ ರಾಜ್‌ ನೀಡಿದ ಪ್ರತಿಕ್ರಿಯೆಯೇನು ಗೊತ್ತೇ?

Update: 2021-11-06 18:27 GMT

ಹೊಸದಿಲ್ಲಿ: ಈ ವಾರ ಅಮೆಝಾನ್‌ ಪ್ರೈಮ್‌ ನಲ್ಲಿ ಬಿಡುಗಡೆಯಾದ ಸೂರ್ಯ ಭಿನಯದ ಜೈಭೀಮ್‌ ಚಿತ್ರದಲ್ಲಿ ನಟ ಪ್ರಕಾಶ್‌ ರಾಜ್‌ ಬುಡಕಟ್ಟು ಜನರ ಮೇಲೆ ಹೇರಲಾದ ಸುಳ್ಳು ಪೊಲೀಸ್ ಪ್ರಕರಣಗಳ ತನಿಖೆಗಾಗಿ ರಚಿಸಲಾದ ಆಯೋಗದ ಮುಖ್ಯಸ್ಥರಾಗಿರುವ ಪ್ರಾಮಾಣಿಕ ಪೋಲೀಸ್ ಪಾತ್ರವನ್ನು ನಿರ್ವಹಿಸಿದ್ದಾರೆ. ಚಿತ್ರವು ಉತ್ತಮ ವಿಮರ್ಶೆಗಳನ್ನು ಪಡೆದಿದ್ದರೂ, ಪ್ರಕಾಶ್ ರಾಜ್ ಹಿಂದಿಯಲ್ಲಿ ಮಾತನಾಡುವ ವ್ಯಕ್ತಿಯೊಬ್ಬನಿಗೆ ಕಪಾಳಮೋಕ್ಷ ಮಾಡುತ್ತಿರುವ ದೃಶ್ಯ ಟ್ವಿಟರ್‌ನಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು. ಇದು 'ಹಿಂದಿ ವಿರೋಧಿ' ಕಾರ್ಯಸೂಚಿಯನ್ನು ಪ್ರಚಾರ ಮಾಡಿದೆ ಎಂದು ಹಲವಾರು ಜನರು ಆರೋಪಿಸಿದ್ದರು.

ಈಗ ಎಲ್ಲ ಆಕ್ರೋಶಕ್ಕೆ ಪ್ರತಿಕ್ರಿಯಿಸಿರುವ ಪ್ರಕಾಶ್ ರಾಜ್, ಟೀಕೆಗಳು ಮನನೊಂದವರ 'ಅಜೆಂಡಾ'ವನ್ನು ಮಾತ್ರ ಬಹಿರಂಗಪಡಿಸುತ್ತವೆ ಎಂದು ಹೇಳಿದ್ದಾರೆ. “ಜೈ ಭೀಮ್ ನಂತಹ ಚಲನಚಿತ್ರವನ್ನು ನೋಡಿದ ನಂತರ, ಅವರು ಬುಡಕಟ್ಟು ಜನರ ಸಂಕಟವನ್ನು ನೋಡಲಿಲ್ಲ, ಅವರು ಅನ್ಯಾಯವನ್ನು ನೋಡಲಿಲ್ಲ ಮತ್ತು ಭಯಪಡಲಿಲ್ಲ, ಆದರೆ ಅವರು ಕಪಾಳಮೋಕ್ಷವನ್ನು ಮಾತ್ರ ನೋಡಿದರು. ಅಷ್ಟೆ ಅವರಿಗೆ ಅರ್ಥವಾಯಿತು. ಇದು ಅವರ ಅಜೆಂಡಾವನ್ನು ಬಹಿರಂಗಪಡಿಸುತ್ತದೆ, ”ಎಂದು ಅವರು ನ್ಯೂಸ್ 9 ಗೆ ಸಂದರ್ಶನವೊಂದರಲ್ಲಿ ಹೇಳಿಕೆ ನೀಡಿದ್ದಾರೆ.

"ಹಿಂದಿ ಹೇರಿಕೆಯ ಕುರಿತು ದಕ್ಷಿಣ ಭಾರತೀಯರಿಗಿರುವ ಕೋಪದಂತಹ ವಿಷಯಗಳನ್ನು ದಾಖಲಿಸಿಕೊಳ್ಳಬೇಕಾಗಿದೆ. ಸ್ಥಳೀಯ ಭಾಷೆ (ತಮಿಳು) ತಿಳಿದಿದ್ದರೂ ವಿಚಾರಣೆಗೆ ಒಳಗಾದ ವ್ಯಕ್ತಿ ಹಿಂದಿ ಮಾತನಾಡುತ್ತಿದ್ದಾರೆ ಎಂದು ತಿಳಿದಾಗ ಪ್ರಕರಣದ ತನಿಖೆ ನಡೆಸುತ್ತಿರುವ ವ್ಯಕ್ತಿಯು ಪ್ರಶ್ನಿಸುವುದನ್ನು ತಪ್ಪಿಸಲು ಹೇಗೆ ಪ್ರತಿಕ್ರಿಯಿಸುತ್ತಾನೆ ಎಂದು ಅವರು ಪ್ರಶ್ನಿಸಿದ್ದಾರೆ.

"ಚಿತ್ರವನ್ನು ೧೯೯೦ರ ಸಂದರ್ಭಕ್ಕೆ ತಕ್ಕಂತೆ ಹೊಂದಿಸಲಾಗಿದೆ. ಎಲ್ಲವೂ ಜನರ ಚಿಂತನೆಯ ಮೇಲೆ ನಿಂತಿದೆ. ಯಾವುದೇ ಔಪಚಾರಿಕ ಶಿಕ್ಷಣವನ್ನು ಪಡೆಯದ ಬುಡಕಟ್ಟು ಮಹಿಳೆಯರಿಗೆ ಇಂಗ್ಲಿಷ್‌ನಲ್ಲಿ ನೋಟಿಸ್ ಕಳುಹಿಸಲಾದ ಸಾವಿರಕ್ಕೂ ಹೆಚ್ಚು ಪ್ರಕರಣಗಳಿವೆ. ಇವೆಲ್ಲವನ್ನೂ ವಿಶಾಲ ದೃಷ್ಟಿಕೋನದಿಂದ ನೋಡಬೇಕಾಗಿದೆ. ತೆರೆಯ ಮೇಲೆ ಪ್ರಕಾಶ್ ರಾಜ್ ಇದ್ದ ಕಾರಣ ಕೆಲವರಿಗೆ ಈ ದೃಶ್ಯ ಕೆರಳಿಸುತ್ತಿತ್ತು. ಇದಕ್ಕೆಲ್ಲಾ ಪ್ರತಿಕ್ರಿಯಿಸುವ ಅಗತ್ಯವಿಲ್ಲ" ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News