×
Ad

ರಾಜ್ಯ ಚುನಾವಣೆ ಮೇಲೆ ಕಣ್ಣು,ಬಿಜೆಪಿಯಿಂದ ಪ್ರಮುಖ ಸಭೆ: ಪ್ರಧಾನಿ ಮೋದಿ, ಅಮಿತ್ ಶಾ ಭಾಗಿ

Update: 2021-11-07 11:37 IST

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ  ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ರವಿವಾರ ಬೆಳಿಗ್ಗೆ ನಡೆದ  ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿದ್ದಾರೆ. ಕೊರೋನ ರೋಗ ಕಾಣಿಸಿಕೊಂಡ ಬಳಿಕ ಮೊದಲ ಬಾರಿ ನಡೆದ ಸಭೆಯಲ್ಲಿ ಬಿಜೆಪಿ ಮುಂದಿನ ವರ್ಷ ನಡೆಯಲಿರುವ ಐದು ರಾಜ್ಯಗಳ ಚುನಾವಣಾ ಕಾರ್ಯತಂತ್ರದ ಕುರಿತು ವ್ಯಾಪಕ ಚರ್ಚೆಗಳನ್ನು ನಡೆಸಲಿದೆ.

124 ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರು ಭಾಗವಹಿಸುವ ಸಭೆಯಲ್ಲಿ ಪ್ರಧಾನಿ ಮೋದಿ ಪ್ರಮುಖ ಭಾಷಣ ಮಾಡುವ ನಿರೀಕ್ಷೆಯಿದೆ. ವಿವಿಧ ರಾಜ್ಯಗಳ ಹಲವಾರು ಮುಖ್ಯಮಂತ್ರಿಗಳು ಹಾಗೂ  ಸದಸ್ಯರು ವರ್ಚುವಲ್ ಆಗಿ ಸಭೆ ಸೇರುತ್ತಿದ್ದಾರೆ.

"ಚಾಲ್ತಿಯಲ್ಲಿರುವ ಕೋವಿಡ್-19 ಪ್ರೋಟೋಕಾಲ್‌ಗಳ ದೃಷ್ಟಿಯಿಂದ ಆಯಾ ರಾಜ್ಯದ ಎಲ್ಲಾ ರಾಜ್ಯ ಅಧ್ಯಕ್ಷರು, ರಾಜ್ಯ ಪ್ರಧಾನ ಕಾರ್ಯದರ್ಶಿಗಳು (ಸಂಘಟನೆ) ಮತ್ತು ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರು ಆಯಾ ರಾಜ್ಯ ಪಕ್ಷದ ಕಚೇರಿಗಳಿಂದ ವರ್ಚುವಲ್ ಆಗಿ ಸಭೆಗೆ ಹಾಜರಾಗುತ್ತಾರೆ" ಎಂದು ಬಿಜೆಪಿ ತಿಳಿಸಿದೆ..

13 ರಾಜ್ಯಗಳು ಹಾಗೂ  ಕೇಂದ್ರಾಡಳಿತ ಪ್ರದೇಶದ ಮೂರು ಲೋಕಸಭೆ ಮತ್ತು 29 ವಿಧಾನಸಭಾ ಸ್ಥಾನಗಳ ಉಪಚುನಾವಣೆ ಫಲಿತಾಂಶಗಳು ಸಭೆಯಲ್ಲಿ ಚರ್ಚೆಗೆ ಬರಬಹುದು. ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೂ ಲೋಕಸಭೆ ಉಪಚುನಾವಣೆ ಹಾಗೂ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿರುವುದು ಪಕ್ಷದಲ್ಲಿ ಆತಂಕ ಮೂಡಿಸಿದೆ.

ಆದಾಗ್ಯೂ, ಪಕ್ಷವು ಅಸ್ಸಾಂ ಮತ್ತು ಮಧ್ಯಪ್ರದೇಶದಲ್ಲಿ ಉತ್ತಮ ಸಾಧನೆ ಮಾಡಿದೆ.

ಮುಂಬರುವ ವಿಧಾನಸಭಾ ಚುನಾವಣೆಯ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಲಿದೆ. ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶ, ಉತ್ತರಾಖಂಡ, ಮಣಿಪುರ ಹಾಗೂ  ಗೋವಾ ,ಕಾಂಗ್ರೆಸ್ ಆಡಳಿತವಿರುವ ಪಂಜಾಬ್‌ನಲ್ಲಿ ಮುಂದಿನ ವರ್ಷದ ಆರಂಭದಲ್ಲಿ ಚುನಾವಣೆಗಳು ನಡೆಯಲಿದ್ದು, ಗುಜರಾತ್ ಹಾಗೂ ಹಿಮಾಚಲ ಪ್ರದೇಶವು 2022 ರ ನಂತರ ಮತದಾನ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News