ಆರ್ಯನ್ ಖಾನ್ ಅಪಹರಿಸುವ ಸಂಚಿನಲ್ಲಿ ಸಮೀರ್ ವಾಂಖೆಡೆ ಭಾಗಿಯಾಗಿದ್ದರು: ನವಾಬ್ ಮಲಿಕ್ ಆರೋಪ
ಮುಂಬೈ: ಎನ್‌ಸಿಬಿಯ ಮುಂಬೈ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರನ್ನು "ಅಪಹರಣ" ಮಾಡುವ ಸಂಚಿನ ಭಾಗವಾಗಿದ್ದರು ಎಂದು ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ರವಿವಾರ ಆರೋಪಿಸಿದ್ದಾರೆ.
ಮುಂಬೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಲಿಕ್, ಬಿಜೆಪಿ ನಾಯಕ ಮೋಹಿತ್ ಭಾರತೀಯ ಈ ಸಂಚಿನ ‘ಮಾಸ್ಟರ್ ಮೈಂಡ್’ ಎಂದು ಹೇಳಿದ್ದಾರೆ.
ಓಶಿವಾರ ಉಪನಗರದಲ್ಲಿರುವ ಸ್ಮಶಾನದಲ್ಲಿ ವಾಂಖೆಡೆ ಅವರು ಮೋಹಿತ್ ಭಾರತೀಯರನ್ನು ಭೇಟಿಯಾಗಿದ್ದರು ಎಂದು ಅವರು ಹೇಳಿದ್ದಾರೆ.
ಕ್ರೂಸ್ ಡ್ರಗ್ಸ್ ಪ್ರಕರಣವನ್ನು ‘ನಕಲಿ’ ಎಂದು ಪದೇ ಪದೇ ಹೇಳಿರುವ ಮಲಿಕ್ ಅವರು ವಾಂಖೆಡೆ ವಿರುದ್ಧ ಸರಣಿ ಆರೋಪಗಳನ್ನು ಮಾಡಿದ್ದಾರೆ.
"ಆರ್ಯನ್ ಖಾನ್ ಕ್ರೂಸ್ ಪಾರ್ಟಿಗೆ ಟಿಕೆಟ್ ಖರೀದಿಸಿಲ್ಲ. ಪ್ರತೀಕ್ ಗಾಬಾ ಹಾಗೂ ಅಮೀರ್ ಫರ್ನಿಚರ್‌ವಾಲಾ ಆರ್ಯನ್ ರನ್ನು ಅಲ್ಲಿಗೆ ಕರೆತಂದರು. ಇದು ಅಪಹರಣ ಹಾಗೂ ಸುಲಿಗೆಯ ವಿಷಯವಾಗಿದೆ. ಮೋಹಿತ್ ಭಾರತೀಯ, ಸಮೀರ್ ವಾಂಖೆಡೆ ಲಂಚದ ಬೇಡಿಕೆಯ ಮಾಸ್ಟರ್ ಮೈಂಡ್ ಹಾಗೂ ಪಾಲುದಾರ" ಎಂದು ಮಲಿಕ್ ಸುದ್ದಿಗಾರರಿಗೆ ತಿಳಿಸಿದರು.
ಎನ್‌ಸಿಪಿ ನಾಯಕರೊಂದಿಗೆ ಸಂಪರ್ಕ ಹೊಂದಿರುವ ಸುನೀಲ್ ಪಟೇಲ್ ಅವರು ಹಡಗಿನಲ್ಲಿ ಡ್ರಗ್ಸ್ ಪತ್ತೆ ಪ್ರಕರಣದ "ಮಾಸ್ಟರ್‌ಮೈಂಡ್" ಎಂದು ಬಿಜೆಪಿ ಪಕ್ಷದ ಸದಸ್ಯ ಮೋಹಿತ್ ಭಾರತೀಯ ಶನಿವಾರ ಆರೋಪಿಸಿದ ನಂತರ ಮಲಿಕ್ ಅವರ ಹೇಳಿಕೆಗಳು ಬಂದಿವೆ.