×
Ad

ಮಹಾರಾಷ್ಟ್ರದ ಮಾಜಿ ಸಚಿವ ಅನಿಲ್ ದೇಶಮುಖ್ ರನ್ನು ನ. 12 ರವರೆಗೆ ಈಡಿ ಕಸ್ಟಡಿಗೆ ಒಪ್ಪಿಸಿದ ಹೈಕೋರ್ಟ್

Update: 2021-11-07 13:53 IST

ಮುಂಬೈ,ನ.7: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಎನ್‌ಸಿಪಿ ನಾಯಕ ಹಾಗೂ ಮಹಾರಾಷ್ಟ್ರದ ಮಾಜಿ ಗೃಹಸಚಿವ ಅನಿಲ್ ದೇಶಮುಖ್ ಅವರನ್ನು ಜಾರಿ ನಿರ್ದೇಶನಾಲಯ (ಈ.ಡಿ.)ದ ವಶಕ್ಕೆ ನೀಡಲು ನಿರಾಕರಿಸಿ 14 ದಿನಗಳ ನ್ಯಾಯಾಂಗ ಬಂಧನವನ್ನು ವಿಧಿಸಿದ್ದ ವಿಶೇಷ ಪಿಎಂಎಲ್‌ಎ ನ್ಯಾಯಾಲಯದ ಆದೇಶವನ್ನು ಬಾಂಬೆ ಉಚ್ಚ ನ್ಯಾಯಾಲಯದ ರಜಾಕಾಲದ ಪೀಠವು  ರವಿವಾರ ತಳ್ಳಿ ಹಾಕಿದೆ. ದೇಶಮುಖ್ ಅವರನ್ನು ನ.12ರವರೆಗೆ ಈ.ಡಿ.ವಶಕ್ಕೆ ಮರಳಿ ಒಪ್ಪಿಸಿದೆ.

ವಿಶೇಷ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಈ.ಡಿ.ಶನಿವಾರ ರಾತ್ರಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್ ಮೂಲಕ ಅರ್ಜಿಯನ್ನು ಸಲ್ಲಿಸಿ ತುರ್ತು ವಿಚಾರಣೆಗೆ ಕೋರಿತ್ತು. ರವಿವಾರ ಏಕ ನ್ಯಾಯಾಧೀಶರ ರಜಾಕಾಲದ ಪೀಠದ ನ್ಯಾ.ಮಾಧವ ಜೆ.ಜಾಮ್ದಾರ್ ಅವರು ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡಿದ್ದರು.

ಈ.ಡಿ.ಸೋಮವಾರ ದೇಶಮುಖ್ ರನ್ನು ಬಂಧಿಸಿತ್ತು. ವಿಶೇಷ ನ್ಯಾಯಾಲಯವು ಶನಿವಾರದವರೆಗೆ ಅವರನ್ನು ಈ.ಡಿ.ಕಸ್ಟಡಿಗೆ ನೀಡಿತ್ತು.

ದೇಶಮುಖ್ ಅವರ ಕಸ್ಟಡಿ ಅವಧಿಯನ್ನು ಇನ್ನೂ ಒಂಭತ್ತು ದಿನಗಳ ಕಾಲ ವಿಸ್ತರಿಸುವಂತೆ ಕೋರಿ ಈ.ಡಿ.ಸಲ್ಲಿಸಿದ್ದ ಅರ್ಜಿಯನ್ನು ಶನಿವಾರ ವಿಶೇಷ ನ್ಯಾಯಾಧೀಶ ಪ್ರಶಾಂತ್ ಆರ್.ಸಿತ್ರೆ ಅವರು ತಿರಸ್ಕರಿಸಿದ್ದರು.

ದೇಶಮುಖ್ ಗೃಹಸಚಿವರಾಗಿದ್ದಾಗ 2020 ಡಿಸೆಂಬರ್ ಮತ್ತು 2021 ಫೆಬ್ರವರಿ ನಡುವೆ ಈಗ ವಜಾಗೊಂಡಿರುವ ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಝೆಯವರ ಮೂಲಕ ವಿವಿಧ ಆರ್ಕೆಸ್ಟ್ರಾ ಬಾರ್‌ಗಳ ಮಾಲಿಕರಿಂದ ಸುಮಾರು 4.7 ಕೋ.ರೂ.ಲಂಚವನ್ನು ಸ್ವೀಕರಿಸಿದ್ದರು ಎಂದು ಈ.ಡಿ.ಆರೋಪಿಸಿದೆ.

ರವಿವಾರ ವಿಚಾರಣೆ ಸಂದರ್ಭ ದೇಶಮುಖ್ ಪರ ವಕೀಲರಾದ ವಿಕ್ರಮ ಚೌಧರಿ ಮತ್ತು ಅನಿಕೇತ ನಿಕಮ್ ಅವರು,ಈ.ಡಿ.ಅರ್ಜಿಯನ್ನು ನಾವು ವಿರೋಧಿಸುತ್ತೇವೆ. ಆದರೆ ಈ.ಡಿ.ವಿಚಾರಣೆಗೊಳಪಡಲು ದೇಶಮುಖ್ ಸ್ವಯಂಪ್ರೇರಿತರಾಗಿ ನಿರ್ಧರಿಸಿದ್ದಾರೆ ಎಂದು ತಿಳಿಸಿದರು. ಬಳಿಕ ಉಚ್ಚ ನ್ಯಾಯಾಲಯವು ದೇಶಮುಖ್ ಅವರಿಗೆ ನ.12ರವರೆಗೆ ಈ.ಡಿ.ಕಸ್ಟಡಿಯನ್ನು ವಿಧಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News