'ಬ್ಯಾಂಕ್‌ ಆವರಣದಲ್ಲಿ ಬುರ್ಖಾ, ಸ್ಕಾರ್ಫ್‌ ಗೆ ಅವಕಾಶವಿಲ್ಲʼ ಎಂಬ ಫಲಕ ಅಂಟಿಸಿದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ

Update: 2021-11-07 09:36 GMT

ಮುಂಬೈನಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನೆಹರು ನಗರ ಶಾಖೆಯು ತನ್ನ ಕೌಂಟರ್‌ನಲ್ಲಿ ಸಂದರ್ಶಕರಿಗೆ ಬುರ್ಖಾ ಧರಿಸದಂತೆ ಸೂಚನೆಯನ್ನು ಅಂಟಿಸಲಾಗಿದ್ದು ಬಳಿಕ ಜನರ ಆಕ್ರೋಶದ ನಂತರ ತೆರವುಗೊಳಿಸಲಾಗಿದೆ ಎಂದು Scroll.in ವರದಿ ಮಾಡಿದೆ. ಕುರ್ಲಾದ ನೆಹರು ನಗರ ಮುಸ್ಲಿಂ ಪ್ರಾಬಲ್ಯದ ಪ್ರದೇಶವಾಗಿದೆ. "ಶಾಖೆಯ ಆವರಣದೊಳಗೆ ಬುರ್ಖಾ, ಸ್ಕಾರ್ಫ್ ನಿಷೇಧಿಸಲಾಗಿದೆ" ಎಂದು ನೋಟಿಸ್ ಹೇಳಿದೆ.

ಈ ನೋಟಿಸ್‌ ಅನ್ನು ಕೆಲದಿನಗಳ ಹಿಂದೆ ಅಂಟಿಸಲಾಗಿದೆ ಎಂದು ಸ್ಥಳೀಯ ನಿವಾಸಿ ಶೇಖ್‌ ಸಾಜಿದ್‌ ಅಕ್ಬರ್‌ scroll.in ಗೆ ತಿಳಿಸಿದ್ದಾರೆ. "ನಮ್ಮಲ್ಲಿ ಹಲವರು ಇದನ್ನು ಟ್ವೀಟ್ ಮಾಡಿದ್ದೇವೆ ಮತ್ತು ಬ್ಯಾಂಕ್ ಅಧಿಕಾರಿಗಳೊಂದಿಗೆ ಈ ಕಳವಳವನ್ನು ವ್ಯಕ್ತಪಡಿಸಿದ್ದೇವೆ" ಎಂದು ಅವರು ಹೇಳಿದರು. "ಅಂತಹ ಸೂಚನೆಯನ್ನು ಏಕೆ ಹಾಕಲಾಗಿದೆ ಎಂದು ನಮಗೆ ಇನ್ನೂ ತಿಳಿದಿಲ್ಲ." ಎಂದು ಅವರು ಹೇಳಿಕೆ ನೀಡಿದ್ದಾರೆ.

ವಾರದ ಆರಂಭದಲ್ಲಿ, ಸ್ಥಳೀಯರು ಮತ್ತು ಸಾಮಾಜಿಕ ಮಾಧ್ಯಮ ಬಳಕೆದಾರರು ಕಳವಳ ವ್ಯಕ್ತಪಡಿಸಿದ ನಂತರ ಬ್ಯಾಂಕ್ ನೋಟಿಸ್ ಅನ್ನು ತೆಗೆದುಹಾಕಿದೆ. ನವೆಂಬರ್ 3 ರಂದು ಮಾಡಿದ ಟ್ವೀಟ್‌ನಲ್ಲಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ "ನಗದು ಹಿಂಪಡೆಯುವಿಕೆ ಮತ್ತು ಇತರ ಹಣಕಾಸು ವಹಿವಾಟಿನ ಸಮಯದಲ್ಲಿ ಸುರಕ್ಷತೆಗಾಗಿ ಮಾತ್ರ" ನೋಟಿಸ್ ಅನ್ನು ಹಾಕಲಾಗಿದೆ ಎಂದು ಹೇಳಿಕೊಂಡಿದೆ."ನಾವು ಬೇರೆ ಯಾವುದೇ ಉದ್ದೇಶವನ್ನು ಹೊಂದಿಲ್ಲ" ಎಂದೂ ಸ್ಪಷ್ಟಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News