×
Ad

ತ್ರಿಪುರಾ ಕೋಮು ಹಿಂಸಾಚಾರದ ಬಗ್ಗೆ ವರದಿ ಮಾಡುತ್ತಿದ್ದವರ ವಿರುದ್ಧ ಯುಎಪಿಎ ಜಾರಿ ಆಘಾತಕಾರಿ:ಎಡಿಟರ್ಸ್ ಗಿಲ್ಡ್

Update: 2021-11-07 17:14 IST
photo: AP

ಅಗರ್ತಲ: ತ್ರಿಪುರಾದ ಕೋಮು ಹಿಂಸಾಚಾರದ ವರದಿ ಮಾಡಿರುವುದಕ್ಕೆ 102 ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳ ವಿರುದ್ಧ ತ್ರಿಪುರಾ ಪೊಲೀಸರು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ (ಯುಎಪಿಎ) ಅನ್ನು ಜಾರಿಗೊಳಿಸಿದ ಒಂದು ದಿನದ ನಂತರ ರಾಜ್ಯದಲ್ಲಿ ಇತ್ತೀಚಿನ ಕೋಮು ಹಿಂಸಾಚಾರದ ಕುರಿತುವರದಿ ಮಾಡುತ್ತಿದ್ದ ಹಾಗೂ  ಬರೆಯುತ್ತಿದ್ದ ಜನರ ವಿರುದ್ಧದ ಕ್ರಮದಿಂದ ಆಘಾತವಾಗಿದೆ ಎಂದು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಹೇಳಿದೆ.

"ಕೋಮು ಹಿಂಸಾಚಾರದ ಬಗ್ಗೆ ಸ್ವತಂತ್ರ ಸತ್ಯಶೋಧನಾ ತನಿಖಾ ಆಯೋಗದ ಭಾಗವಾಗಿ ತ್ರಿಪುರಾಕ್ಕೆ ಭೇಟಿ ನೀಡಿದ್ದ ದಿಲ್ಲಿ ಮೂಲದ ಕೆಲವು ವಕೀಲರ ವಿರುದ್ಧ ಪೊಲೀಸರು ಯುಎಪಿಎ ಆರೋಪಗಳನ್ನು ಸಲ್ಲಿಸಿದ ಕೆಲವು ದಿನಗಳ ನಂತರ ಈ ಬೆಳವಣಿಗೆ ನಡೆದಿದೆ. ಪತ್ರಕರ್ತರಲ್ಲಿ ಒಬ್ಬರಾದ ಶ್ಯಾಮ್ ಮೀರಾ ಸಿಂಗ್ ಅವರು ಕೇವಲ 'ತ್ರಿಪುರಾ ಉರಿಯುತ್ತಿದೆ' ಎಂದು ಟ್ವೀಟ್ ಮಾಡಿದ್ದಕ್ಕಾಗಿ ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಆರೋಪಿಸಿದ್ದಾರೆ. ಇದು ಅತ್ಯಂತ ಗೊಂದಲದ ಪ್ರವೃತ್ತಿಯಾಗಿದೆ. ಜಾಮೀನು ಅರ್ಜಿಗಳ ಪ್ರಕ್ರಿಯೆಗಳಲ್ಲಿ ಅತ್ಯಂತ ಕಠಿಣ ಮತ್ತು ಮಿತಿಮೀರಿದ ಇಂತಹ ಕಠಿಣ ಕಾನೂನನ್ನು ಕೇವಲ ಕೋಮು ಹಿಂಸಾಚಾರದ ಬಗ್ಗೆ ವರದಿ ಮಾಡಿದ್ದಕ್ಕೆ ಹಾಗೂ  ಪ್ರತಿಭಟಿಸಿರುವುದಕ್ಕೆ ಬಳಸಲಾಗುತ್ತಿದೆ”ಎಂದು ಎಡಿಟರ್ಸ್ ಗಿಲ್ಡ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ಈ ಕ್ರಮವು "ಬಹುಸಂಖ್ಯಾತ ಹಿಂಸಾಚಾರವನ್ನು ನಿಯಂತ್ರಿಸುವಲ್ಲಿ ತನ್ನ ವೈಫಲ್ಯದಿಂದ ಗಮನವನ್ನು ಬೇರೆಡೆಗೆ ತಿರುಗಿಸಲು ರಾಜ್ಯ ಸರಕಾರದ ಪ್ರಯತ್ನವಾಗಿದೆ" ಎಂದು ಅದು ಆರೋಪಿಸಿದೆ.

ಪತ್ರಕರ್ತರು ಹಾಗೂ  ನಾಗರಿಕ ಸಮಾಜದ ಕಾರ್ಯಕರ್ತರಿಗೆ ದಂಡ ವಿಧಿಸುವ ಬದಲು ಗಲಭೆಯ ಸಂದರ್ಭಗಳ ಬಗ್ಗೆ ಮುಕ್ತ ಮತ್ತು ನ್ಯಾಯಯುತ ತನಿಖೆಯಾಗಬೇಕು ಎಂದು ಗಿಲ್ಡ್ ಒತ್ತಾಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News