ದೇಶದ ವರ್ಚಸ್ಸನ್ನು ಹೆಚ್ಚಿಸಲು ಪ್ರಧಾನಿ ಶ್ರಮಿಸುತ್ತಿದ್ದರೆ ಪ್ರತಿಪಕ್ಷ ಅದನ್ನು ಕೆಡಿಸುತ್ತಿದೆ: ನಿರ್ಮಲಾ ಸೀತಾರಾಮನ್
ಹೊಸದಿಲ್ಲಿ,ನ.7: ಇಲ್ಲಿ ರವಿವಾರ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ತನ್ನ ಭಾಷಣದ ಸಂದರ್ಭದಲ್ಲಿ ಸರಕಾರದ ಸಾಧನೆಗಳನ್ನು ಪಟ್ಟಿ ಮಾಡಿದ ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು,ಪ್ರಧಾನಿ ನರೇಂದ್ರ ಮೋದಿಯವರು ಭಾರತದ ವರ್ಚಸ್ಸನ್ನು ಹೆಚ್ಚಿಸಲು ಶ್ರಮಿಸುತ್ತಿದ್ದರೆ ಪ್ರತಿಪಕ್ಷಗಳು ಅದಕ್ಕೆ ಕಳಂಕವನ್ನು ತರುತ್ತಿವೆ ಎಂದು ಆರೋಪಿಸಿದರು.
ಲಸಿಕೆ ಕಾರ್ಯಕ್ರಮದ ಬಗ್ಗೆ ವಿಶ್ವಾದ್ಯಂತ ಭಾರತವನ್ನು ಹೊಗಳಲಾಗುತ್ತಿದೆ,ಅದರೆ ಪ್ರತಿಪಕ್ಷಗಳು ಆರಂಭದಿಂದಲೇ ಲಸಿಕೆ ನೀಡಿಕೆಯ ಬಗ್ಗೆ ಸಂಶಯವನ್ನು ಹರಡಿದ್ದನ್ನೂ ನಾವು ಮರೆತಿಲ್ಲ ಎಂದರು.
100 ಕೋ.ಡೋಸ್‌ಗೂ ಅಧಿಕ ಲಸಿಕೆ ವಿತರಣೆಯಲ್ಲಿ ಭಾರತವು ಅನುಸರಿಸಿದ್ದ ಕ್ರಮಬದ್ಧ ರೀತಿಯನ್ನು ಇಡೀ ವಿಶ್ವವೇ ಹೊಗಳುತ್ತಿದೆ ಎಂದ ಅವರು,ಲಸಿಕೆ ನೀಡಿಕೆಗಾಗಿ ಮತ್ತು ಒಟ್ಟಾರೆ ಆರೋಗ್ಯ ರಕ್ಷಣೆ ಮೂಲಸೌಕರ್ಯಗಳನ್ನು ಹೆಚ್ಚಿಸಲು ಮುಂಗಡಪತ್ರದಲ್ಲಿ 36,000 ಕೋ.ರೂ.ಗಳನ್ನು ಹಂಚಿಕೆ ಮಾಡಲಾಗಿತ್ತು ಎಂದು ಬೆಟ್ಟು ಮಾಡಿದರು.
ಸಶಸ್ತ್ರ ಪಡೆಗಳಲ್ಲಿ ಮಹಿಳೆಯರಿಗೆ ಪ್ರವೇಶ ಮತ್ತು ಸೈನಿಕ ಶಾಲೆಗಳ ಸ್ಥಾಪನೆ ಸರಕಾರದ ದೃಢಸಂಕಲ್ಪದ ಭಾಗವಾಗಿವೆ ಎಂದ ಅವರು,ಮಹಿಳೆಯರ ನೇತೃತ್ವದಲ್ಲಿ ಅಭಿವೃದ್ಧಿ ನಮ್ಮ ಧ್ಯೇಯವಾಗಿದೆ ಎಂದರು.
ಸಭೆಯಲ್ಲಿ ಹಲವಾರು ಬಿಜೆಪಿ ನಾಯಕರು ಲಸಿಕೆ ನೀಡಿಕೆಗೆ ಮತ್ತು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಬಡವರಿಗೆ ಉಚಿತ ಪಡಿತರ ವಿತರಣೆಗೆ ಹೆಚ್ಚಿನ ಒತ್ತು ನೀಡುವಂತೆ ಆಗ್ರಹಿಸಿದರು.
ಮಾನವ ಜೀವಗಳ ಬಗ್ಗೆ ಕಾಳಜಿ ವಹಿಸಿ ನಾವು ಎಂಟು ತಿಂಗಳಿಗೆ 80 ಕೋಟಿ ಜನರಿಗೆ ಆಹಾರವನ್ನು ಪೂರೈಸಿದ್ದೇವೆ ಎಂದು ಹೇಳಿದ ಸೀತಾರಾಮನ್, ‘ಒಂದು ರಾಷ್ಟ್ರ ಒಂದು ಪಡಿತರ ಚೀಟಿ’ಯೋಜನೆಯನ್ನು ಅನುಷ್ಠಾನಶಿಲಿಸಿರುವುದನ್ನು ಬೆಟ್ಟು ಮಾಡಿದರು.
ಸಂವಿಧಾನದ 370ನೇ ವಿಧಿಯ ರದ್ದತಿಯನ್ನು ಪ್ರಸ್ತಾಪಿಸಿದ ಅವರು,ಎಲ್ಲ ತೊಂದರೆಗಳ ಹೊರತಾಗಿಯೂ ಜಮ್ಮು-ಕಾಶ್ಮೀರವು ಈಗ ಭೀತಿವಾದದಿಂದ ಅಭಿವೃದ್ಧಿಯತ್ತ ಸಾಗುತ್ತಿದೆ. 2004 ಮತ್ತು 2014ರ ನಡುವಿನ ಅವಧಿಯಲ್ಲಿ ಜಮ್ಮು-ಕಾಶ್ಮೀರದಲ್ಲಿ 2,081 ಜನರು ಭಯೋತ್ಪಾದನೆ ಸಂಬಂಧಿತ ಘಟನೆಗಳಲ್ಲಿ ಮೃತಪಟ್ಟಿದ್ದರೆ 2014ರಿಂದ 2021 ಸೆಪ್ಟಂಬರ್‌ವರೆಗೆ ಕೇವಲ 239 ನಾಗರಿಕರು ಸಾವನ್ನಪ್ಪಿದ್ದಾರೆ. ಇದು ಜಮ್ಮು-ಕಾಶ್ಮೀರದಲ್ಲಿ ಈಗ ಶಾಂತಿ ಸ್ಥಾಪನೆಯಾಗಿದೆ ಎನ್ನುವುದನ್ನು ಸಾಬೀತುಗೊಳಿಸಿದೆ ಎಂದರು.
370ನೇ ವಿಧಿ ರದ್ದತಿಯ ಬಳಿಕ ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಮಂಡಳಿಗಳು ಮತ್ತು ಬ್ಲಾಕ್ ಅಭಿವೃದ್ಧಿ ಮಂಡಳಿಗಳ ಚುನಾವಣೆಗಳನ್ನು ಪ್ರಸ್ತಾಪಿಸಿದ ಅವರು,ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಹೊರಬರಲು ಜನರು ಸಿದ್ಧರಾಗಿದ್ದಾರೆ ಎಂದರು.
ಜಮ್ಮು-ಕಾಶ್ಮೀರಕ್ಕಾಗಿ 2021,ಜನವರಿಯಲ್ಲಿ ಆರಂಭಿಸಲಾದ 28,400 ಕೋ.ರೂ.ಗಳ ಕೈಗಾರಿಕೆ ಉತ್ತೇಜನ ಯೋಜನೆಯನ್ನು ಪ್ರಮುಖವಾಗಿ ಬಿಂಬಿಸಿದ ಅವರು,56,201 ಕೋ.ರೂ.ವೆಚ್ಚದಲ್ಲಿ 54 ಯೋಜನೆಗಳಿಗೂ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.