×
Ad

ಸುಸ್ತಿ ಸಾಲ ಬಾಕಿ ಪ್ರಕರಣ: ಅಸ್ಸಾಂ ಮಾಜಿ ಸಿಎಂ ಪುತ್ರ ಬಂಧನ

Update: 2021-11-08 09:21 IST

ಗುವಾಹತಿ, ನ.8: ಅಸ್ಸಾಂ ಮಾಜಿ ಮುಖ್ಯಮಂತ್ರಿ ಹಿತೇಶ್ವರ್ ಸೈಕಿಯಾ ಅವರ ಪುತ್ರ ಅಶೋಕ್ ಸೈಕಿಯಾ ಅವರನ್ನು 1998ರ ಸುಸ್ತಿ ಸಾಲ ಬಾಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಅಧಿಕಾರಿಗಳು ಬಂಧಿಸಿದ್ದಾರೆ.

ಅಶೋಕ್ ಸೈಕಿಯಾ ಅವರು, ಕಾಂಗ್ರೆಸ್ ಮುಖಂಡ ಹಾಗೂ ವಿಧಾನಸಭೆ ವಿರೋಧ ಪಕ್ಷದ ಮುಖಂಡ ದೇಬಬ್ರತ ಸೈಕಿಯಾ ಅವರ ಸಹೋದರ. ರವಿವಾರ ದಿಸ್‌ಪುರ ನಿವಾಸದ ಮೇಲೆ ದಾಳಿ ನಡೆಸಿದ ಸಿಬಿಐ ಅಧಿಕಾರಿಗಳು ಸೈಕಿಯಾ ಅವರನ್ನು ಬಂಧಿಸಿದರು. ಸೈಕಿಯಾ ಅವರನ್ನು ಸಿಬಿಐ ವಿಶೇಷ ನ್ಯಾಯಾಲಯದ ಮುಂದೆ ಸೋಮವಾರ ಹಾಜರುಪಡಿಸಲಾಗುತ್ತಿದೆ.

ಅಸ್ಸಾಂ ರಾಜ್ಯ ಸಹಕಾರ ಮತ್ತು ಕೃಷಿ ಅಭಿವೃದ್ಧಿ ಬ್ಯಾಂಕ್ (ಎಎಸ್‌ಸಿಎಆರ್‌ಡಿ) 1998ರಲ್ಲಿ ಗುವಾಹತಿ ಪಾಲ್ತಾನ್ ಬಝಾರ್ ಠಾಣೆಯಲ್ಲಿ ದಾಖಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೈಕಿಯಾ ಅವರನ್ನು ಬಂಧಿಸಲಾಗಿದೆ. ಬ್ಯಾಂಕ್‌ನಿಂದ ಪಡೆದ ಸಾಲವನ್ನು ಮರು ಪಾವತಿ ಮಾಡಿಲ್ಲ ಎಂದು ಆಪಾದಿಸಿ ದೂರು ನೀಡಲಾಗಿತ್ತು. 2001ರಲ್ಲಿ ಈ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಲಾಗಿತ್ತು.

ಕೇಂದ್ರೀಯ ತನಿಖಾ ಸಂಸ್ಥೆ ಸೈಕಿಯಾ ವಿರುದ್ಧ ಎರಡು ಪ್ರಕರಣಗಳನ್ನು ದಾಖಲಿಸಿದ್ದು, ಒಂದು ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದರು. ಆದಾಗ್ಯೂ, 2011ರಲ್ಲಿ ನಡೆದ 'ಸಂಧಾನ ವ್ಯಾಜ್ಯ ಪರಿಹಾರ ಯೋಜನೆ'ಯಡಿ ಸಾಲವನ್ನು ತಾವು ಮರು ಪಾವತಿ ಮಾಡಿದ್ದಾಗಿ ಸೈಕಿಯಾ ಸಮರ್ಥಿಸಿಕೊಂಡಿದ್ದರು.

"ಇದಕ್ಕೆ ಸಂಬಂಧಿಸಿದ ಸಾಕ್ಷಿಯನ್ನು ಕೂಡಾ ಬ್ಯಾಂಕ್ 2015ರಲ್ಲಿ ಬಿಡುಗಡೆ ಮಾಡಿತ್ತು. ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕರು ಈ ಹೇಳಿಕೆಗೆ ಸಹಿ ಮಾಡಿದ್ದರು. ಇದು ಸ್ವ ಹಿತಾಸಕ್ತಿಯ ಮಂದಿ ತಮ್ಮ ವಿರುದ್ಧ ನಡೆಸಿದ ಪಿತೂರಿಯ ಭಾಗವಾಗಿದೆ" ಎಂದು ಅವರು ಹೇಳಿದ್ದಾರೆ.

ಎಲ್ಲ ಬ್ಯಾಂಕ್ ಬಾಕಿ ಮರುಪಾವತಿಯಾಗಿದೆ ಎಂದು ಬ್ಯಾಂಕಿನ ಲೆಟರ್‌ ಹೆಡ್‌ನಲ್ಲಿ ನೀಡಿದ ಹೇಳಿಕೆಯನ್ನು ಕೂಡಾ ಸೈಕಿಯಾ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News