ಛತ್ತೀಸ್‌ಗಢ: ಎಕೆ-47ನಿಂದ ಗುಂಡಿನ ದಾಳಿ ನಡೆಸಿ ನಾಲ್ವರು ಸಹೋದ್ಯೋಗಿಗಳ ಹತ್ಯೆಗೈದ ಸಿಆರ್‌ಪಿಎಫ್ ಕಾನ್‌ಸ್ಟೇಬಲ್‌

Update: 2021-11-08 05:16 GMT
ಸಾಂದರ್ಭಿಕ ಚಿತ್ರ (PTI)

ರಾಯಪುರ: ಸೋಮವಾರ ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯ ಅರೆಸೇನಾ ಪಡೆಯ ಶಿಬಿರದಲ್ಲಿ ಸಿಆರ್‌ಪಿಎಫ್ ಕಾನ್‌ಸ್ಟೇಬಲ್‌ ವೊಬ್ಬರು  ಸಹೋದ್ಯೋಗಿಗಳ ಮೇಲೆ  ಗುಂಡು ಹಾರಿಸಿದ ಪರಿಣಾಮವಾಗಿ ನಾಲ್ವರು ಸಿಆರ್‌ಪಿಎಫ್ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಹಾಗೂ  ಮೂವರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಜ್ಯದ ರಾಜಧಾನಿ ರಾಯಪುರದಿಂದ ಸುಮಾರು 400 ಕಿ.ಮೀ ದೂರದಲ್ಲಿರುವ ಜಿಲ್ಲೆಯ ಮರೈಗುಡ ಪೊಲೀಸ್ ಠಾಣೆ ವ್ಯಾಪ್ತಿಯ ಲಿಂಗನಪಲ್ಲಿ ಗ್ರಾಮದ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) 50ನೇ ಬೆಟಾಲಿಯನ್ ಶಿಬಿರದಲ್ಲಿ ಬೆಳಗಿನ ಜಾವ 3.15ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಪೊಲೀಸ್ ಮಹಾನಿರೀಕ್ಷಕರಾದ (ಬಸ್ತರ್ ಶ್ರೇಣಿ) ಸುಂದರರಾಜ್ ಪಿ. ತಿಳಿಸಿದ್ದಾರೆ.

ಪ್ರಾಥಮಿಕ ಮಾಹಿತಿಯ ಪ್ರಕಾರ ಕಾನ್‌ಸ್ಟೇಬಲ್‌ ರೀತೇಶ್ ರಂಜನ್ ತನ್ನ ಸೇವಾ ಆಯುಧವಾದ ಎಕೆ -47 ರೈಫಲ್‌ನಿಂದ ತನ್ನ ಸಹೋದ್ಯೋಗಿಗಳ ಮೇಲೆ ಗುಂಡು ಹಾರಿಸಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಗಾಯಗೊಂಡ ಏಳು ಸಿಬ್ಬಂದಿಯನ್ನು ನೆರೆಯ ತೆಲಂಗಾಣದ ಹತ್ತಿರದ ಭದ್ರಾಚಲಂ ಪ್ರದೇಶದ ಆಸ್ಪತ್ರೆಗೆ ತಕ್ಷಣವೇ ಸ್ಥಳಾಂತರಿಸಲಾಯಿತು.  ನಾಲ್ವರು ಆಸ್ಪತ್ರೆಗೆ ದಾಖಲಿಸುವ ದಾರಿಯಲ್ಲೇ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೃತರನ್ನು ಕಾನ್‌ಸ್ಟೇಬಲ್‌ಗಳಾದ ರಾಜಮಣಿ ಕುಮಾರ್ ಯಾದವ್, ರಾಜೀಬ್ ಮೊಂಡಲ್, ಧಂಜಿ ಹಾಗೂ  ಧರ್ಮೇಂದ್ರ ಕುಮಾರ್ ಎಂದು ಗುರುತಿಸಲಾಗಿದೆ. ಗಾಯಗೊಂಡ ಇತರ ಮೂವರು ಯೋಧರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರು ಹೇಳಿದರು.

“ಗುಂಡಿನ ದಾಳಿಯ ಹಿಂದಿನ ಉದ್ದೇಶ ಇನ್ನೂ ಪತ್ತೆಯಾಗಿಲ್ಲ ಹಾಗೂ  ಘಟನೆಯ ಬಗ್ಗೆ ತನಿಖೆ ನಡೆಯುತ್ತಿದೆ”ಎಂದು ಅಧಿಕಾರಿ ಹೇಳಿದರು.

ಕಾನ್‌ಸ್ಟೇಬಲ್ ರಂಜನ್ ರನ್ನು ಕೂಡಲೇ ಬಂಧಿಸಲಾಗಿದ್ದು, ಆತನ ವಿಚಾರಣೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News